ಚೀಮೆನಿ:(ಕಾಸರಗೋಡು) ಮನೆಯ ಗ್ರಿಲ್ ಮುರಿದು ಕಳ್ಳ ಮನೆಯೊಳಗೆ ಪ್ರವೇಶಿಸಿ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಘಟನೆ ವರದಿಯಾಗಿದೆ. ಕುಟುಂಬವು ದೇವಸ್ಥಾನದ ಉತ್ಸವಕ್ಕೆ ತೆರಳಿದ್ದಾಗ ಕಳವು ನಡೆದಿದೆ. ಚೀಮೆನಿ ಪೇಟೆಯ ಚೇತನ ರಸ್ತೆಯ ನಿವಾಸಿ ಪ್ಲಾಂಕು ಕುಂಞಂಬು ಅವರ ಮನೆಯಲ್ಲಿ ಗುರುವಾರ (ಮೇ 7, 2026) ರಾತ್ರಿ 9 ರಿಂದ ರಾತ್ರಿ 10.30 ರ ನಡುವೆ ಈ ಘಟನೆ ನಡೆದಿದೆ.
ಹತ್ತಿರದ ದೈವಸ್ಥಾನದಲ್ಲಿ ಕಳಿಯಾಟ ನಡೆಯುತ್ತಿತ್ತು. ಕುಟುಂಬ ಸದಸ್ಯರು ಮನೆಗೆ ಬೀಗ ಹಾಕಿ ತೆರಳಿದ್ದಾಗ ಕಳವು ನಡೆದಿದೆ. ಮನೆಯ ಹಿಂದಿನ ಗ್ರಿಲ್ ಮುರಿದು ಕಳ್ಳ ಒಳನುಗ್ಗಿದ್ದಾನೆ. ಮನೆಯ ಅಡುಗೆಮನೆಯಲ್ಲಿದ್ದ ಚಾಕುವಿನಿಂದ ಬೀರು ಒಡೆದು ಚಿನ್ನವನ್ನು ಎಗರಿಸಿದ್ದು, ನಾಲ್ಕು ಚಿನ್ನದ ಬಳೆಗಳು ಮತ್ತು ಉಂಗುರ ಕಳೆದುಹೋಗಿದೆ.
ಕಬೋರ್ಡ್‍ನ ಬೀರು ಒಡೆಯುವಾಗ ಕಳ್ಳನಿಗೆ ಚಾಕುವಿನಿಂದ ಗಾಯವಾಗಿದೆ ಎಂಬುದು ಪೋಲೀಸರ ಆರಂಭಿಕ ತೀರ್ಮಾನ. ಮನೆಯೊಳಗಿನ ಕೊಠಡಿ, ಹಾಸಿಗೆ ಮತ್ತು ಬಟ್ಟೆಗಳ ಮೇಲೆ ರಕ್ತದ ಕಲೆಗಳು ಕಂಡುಬಂದಿವೆ. ಕಳ್ಳತನಕ್ಕೆ ಬಳಸಲಾಗಿದೆ ಎಂದು ನಂಬಲಾದ ಚಾಕು ಮನೆಯ ಹೊರಗೆ ಬಿಟ್ಟುಹೋಗಿರುವುದು ಕಂಡುಬಂದಿದೆ.
ಘಟನೆಯ ಬಗ್ಗೆ ತಿಳಿದ ನಂತರ, ಚೀಮೇನಿ ಇನ್ಸ್‍ಪೆಕ್ಟರ್ ರಾಜಗೋಪಾಲನ್ ಮತ್ತು ಎಸ್‍ಐ ಶಶಿ ನೇತೃತ್ವದ ಪೋಲೀಸ್ ತಂಡ ಸ್ಥಳಕ್ಕೆ ತಲುಪಿ ತನಿಖೆ ನಡೆಸಿದೆ. ಕಾಸರಗೋಡಿನ ಪೋಲೀಸ್ ಶ್ವಾನದಳ, ಬೆರಳಚ್ಚು ತಜ್ಞರು ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕೆ ತಲುಪಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಪೋಲೀಸ್ ಶ್ವಾನ ಮನೆಯ ಮೆಟ್ಟಿಲುಗಳನ್ನು ಹತ್ತಿ ನಂತರ ಹತ್ತಿರದ ಐದು ಮನೆಗಳಿಗೆ ಓಡಿಹೋಯಿತು. ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಗಳನ್ನು ಕೇಂದ್ರೀಕರಿಸಿ ಪೆÇಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.



