ಪಶ್ಚಿಮ ಏಷ್ಯಾ ಸಂಘರ್ಷ ಅಂತ್ಯಗೊಳಿಸುವ ಕದನ ವಿರಾಮ ಒಪ್ಪಂದ ಅಂತಿಮ ಹಂತದಲ್ಲಿದೆ ಎಂದು ಇರಾನ್ ಹಾಗೂ ಅಮೆರಿಕ ಸುಳಿವು ನೀಡಿದೆ. ಆದರೆ ಉಭಯ ರಾಷ್ಟ್ರಗಳು ಒಪ್ಪಂದದ ಪ್ರತಿಯನ್ನು ಇದುವರೆಗೂ ಬಿಡುಗಡೆಗೊಳಿಸಿಲ್ಲ. ಎರಡೂ ಪಕ್ಷಗಳು ಯಾವ ವಿಷಯದಲ್ಲಿ ಒಪ್ಪಂದಕ್ಕೆ ಬಂದಿವೆ?
ಯಾವ ವಿಷಯದಲ್ಲಿ ಭಿನ್ನಾಭಿಪ್ರಾಯ ಮುಂದುವರಿದಿದೆ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಹಲವು ಸಂದರ್ಶನಗಳಲ್ಲಿ ಎರಡೂ ದೇಶಗಳ ನಾಯಕರು ಒಪ್ಪಂದ ಮೂಲ ವಿಷಯಗಳನ್ನು ಭಿನ್ನವಾಗಿ ಪ್ರಸ್ತುತಪಡಿಸಿದ್ದಾರೆ. ಅಣ್ವಸ್ತ್ರ ಯೋಜನೆ ಹಾಗೂ ಸಮೃದ್ಧೀಕರಿಸಿದ ಯುರೇನಿಯಂ ಹಸ್ತಾಂತರದ ಬಗ್ಗೆ ಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ಈ ಎರಡು ವಿಷಯಗಳೇ ಒಪ್ಪಂದ ಪ್ರಮುಖ ಅಂಶಗಳು.
ಒಪ್ಪಂದಕ್ಕೆ ಬರಲು ವಿಳಂಬವಾಗುತ್ತಿರುವ ಪ್ರಮುಖ 5 ವಿಷಯಗಳು ಹಾಗೂ ಅವುಗಳ ಬಗ್ಗೆ ಉಭಯ ದೇಶಗಳ ಅಭಿಪ್ರಾಯ ಇಲ್ಲಿವೆ.
ಇರಾನ್‌ನ ಅಣ್ವಸ್ತ್ರ ಯೋಜನೆ
ಸಮೃದ್ಧೀಕರಿಸಿದ ಯುರೇನಿಯಂ ಅನ್ನು ಒಪ್ಪಿಸಬೇಕು ಎನ್ನುವುದು ಅಮೆರಿಕದ ಬೇಡಿಕೆ. ಅದರ ಮೂಲಕ ಪರಮಾಣು ಶಸ್ತ್ರಾಸ್ತ್ರ ತಯಾರಿಸಬಹುದು ಎನ್ನುವುದು ಅಮೆರಿಕ ಹಾಗೂ ಇಸ್ರೇಲ್‌ನ ಆತಂಕ. ಆದರೆ ಇರಾನ್ ಇದನ್ನು ಒಪ್ಪಿಕೊಳ್ಳುತ್ತಿಲ್ಲ.
ತನ್ನ ಬಳಿ ಇರುವ ಸಮೃದ್ಧೀಕರಿಸಿದ ಯುರೇನಿಯಂ ಬಳಸಿ ಇರಾನ್ ಏನು ಮಾಡಬಹುದು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಅಂತರರಾಷ್ಟ್ರೀಯ ಅಣು ಇಂಧನ ಏಜೆನ್ಸಿ ಪ್ರಕಾರ, ಇರಾನ್ ಬಳಿ ಸುಮಾರು 970 ಪೌಂಡ್‌ಗಳಷ್ಟು ಶೇ 60 ಸಮೃದ್ಧೀಕರಿಸಿದ ಯುರೇನಿಯಂ ಹಾಗೂ 11 ಟನ್‌ಗಳಷ್ಟು ವಿವಿಧ ಹಂತಗಳಲ್ಲಿ ಸಮೃದ್ಧೀಕರಿಸಿದ ಯುರೇನಿಯಂ ದಾಸ್ತಾನು ಇದೆ.
ಸಮೃದ್ಧೀಕರಿಸಿದ ಯುರೇನಿಯಂ ಒಪ್ಪಿಸುವ ಬಗ್ಗೆ ಇರಾನ್ ಹಾಗೂ ಅಮೆರಿಕ ನಡುವೆ ತಾತ್ವಿಕ ಒಪ್ಪಂದ ನಡೆದಿದೆ. ಆದರೆ ಅದನ್ನು ಹೇಗೆ ಒಪ್ಪಿಸಬೇಕು ಎನ್ನುವುದರ ಬಗ್ಗೆ ಮಾತುಕತೆ ಜಾರಿಯಲ್ಲಿದೆ ಎಂದು ಅಮೆರಿಕ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಭವಿಷ್ಯದಲ್ಲಿ ಇರಾನ್, ಯುರೇನಿಯಂ ಸಮೃದ್ಧೀಕರಿಸುವ ಯೋಜನೆ ಮುಂದುವರಿಸಲಿದೆಯೇ ಎನ್ನುವುದು ಮತ್ತೊಂದು ಪ್ರಶ್ನೆಯಾಗಿದೆ.
ಯುರೇನಿಯಂ ಸಮೃದ್ಧೀಕರಣಕ್ಕೆ ನಿಷೇಧ ಹೇರುವ ಬಗ್ಗೆ ಒಪ್ಪಂದದಲ್ಲಿ ಯಾವುದೇ ಪ್ರಸ್ತಾಪ ಇಲ್ಲ. ಭವಿಷ್ಯದ ಮಾತುಕತೆಯಲ್ಲಿ ಈ ವಿಷಯ ಇರಲಿದೆ ಎಂದು ಅಮೆರಿಕ ಅಧಿಕಾರಿ ತಿಳಿಸಿದ್ದಾರೆ. ಆದರೆ ಹಿಂದಿನ ಮಾತುಕತೆಯಲ್ಲಿ, ಕನಿಷ್ಠ 20 ವರ್ಷ ಯುರೇನಿಯಂ ಸಮೃದ್ಧೀಕರಣವನ್ನು ಕೈಬಿಡಬೇಕು ಎಂದು ಅಮೆರಿಕ ಇರಾನ್‌ಗೆ ಆಗ್ರಹಿಸಿತ್ತು.
ಇರಾನ್‌ಗೆ ಅಣ್ವಸ್ತ್ರ ತಯಾರಿಸಲು ನಿಷೇಧ ಹೇರದ ತಾತ್ಕಾಲಿಕ ಕದನ ವಿರಾಮ ಪ್ರಸ್ತಾವನ್ನೂ ಒಪ್ಪಿಕೊಳ್ಳಲು ಟ್ರಂಪ್ ಆಡಳಿತ ಸಜ್ಜಾಗಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಭಾನುವಾರ ಹೇಳಿದ್ದರು.
'ಅಣ್ವಸ್ತ್ರಕ್ಕೆ ಸಂಬಂಧಿಸಿದ ಒಪ್ಪಂದವನ್ನು 72 ಗಂಟೆಯೊಳಗೆ ಮುಗಿಸುವುದು ಸುಲಭವಲ್ಲ' ಎಂದು ಭಾರತದ ಭೇಟಿಯಲ್ಲಿರುವ ರುಬಿಯೊ ಹೇಳಿದ್ದಾರೆ. ಎರಡು ತಿಂಗಳಲ್ಲಿ ಅಂತಿಮ ಒಪ್ಪಂದ ನಡೆಯದಿದ್ದರೆ, ಇರಾನ್ ಮೇಲೆ ಮತ್ತೆ ದಾಳಿ ಮಾಡುವ ಆಯ್ಕೆಯನ್ನು ಅಮೆರಿಕ ಪರಿಗಣಿಸಬಹುದು ಎಂದಿದ್ದಾರೆ.
ಆದರೆ ಸಮೃದ್ಧೀಕರಿಸಿದ ಯುರೇನಿಯಂ ಬಗ್ಗೆ ಯಾವುದೇ ಒಪ್ಪಂದ ನಡೆದಿಲ್ಲ ಎಂದು ಇರಾನ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸಮೃದ್ಧೀಕರಿಸಿದ ಯುರೇನಿಯಂ ಬಗ್ಗೆ ಒಪ್ಪಂದದಲ್ಲಿ ಸೇರಿಸಿಕೊಳ್ಳಲು ಇರಾನ್ ಆರಂಭದಲ್ಲಿ ಹಿಂಜರಿದಿತ್ತು. 'ಅಣ್ವಸ್ತ್ರಕ್ಕೆ ಸಂಬಂಧಿಸಿದ ವಿಷಯಗಳ ಒಪ್ಪಂದಕ್ಕೆ ಬರಲು 30-60 ದಿನಗಳು ಬೇಕು' ಎಂದು ಮೂವರು ಇರಾನ್ ಅಧಿಕಾರಿಗಳು ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದ್ದಾರೆ. ತಾವು ಒಪ್ಪಿಕೊಂಡಿದ್ದೇವೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ ಪ್ರಸ್ತಾಪವು ಶನಿವಾರದಂದು ಟ್ರಂಪ್ ಅವರು ಪೋಸ್ಟ್ ಮಾಡಿದ್ದ ಕರಡಿನಲ್ಲಿ ಇದೆಯೇ ಅಥವಾ ಭಾನುವಾರ ಅಮೆರಿಕದ ಅಧಿಕಾರಿ ಉಲ್ಲೇಖಿಸಿದರಲ್ಲಿ ಇದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
ಮುಟ್ಟುಗೋಲು ಹಾಕಲಾಗಿರುವ ಇರಾನ್‌ನ ಸ್ವತ್ತುಗಳು
ಅಂತರರಾಷ್ಟ್ರೀಯ ನಿರ್ಬಂಧಗಳಿಂದಾಗಿ ವಿದೇಶಗಳಲ್ಲಿ ಮುಟ್ಟುಗೋಲು ಹಾಕಲಾಗಿರುವ ಸ್ವತ್ತುಗಳನ್ನು ಮರಳಿ ಪಡೆಯಲು ಇರಾನ್ ಬಯಸಿದೆ. ಪ್ರಸ್ತಾಪಿತ ಒಪ್ಪಂದವು $ 25 ಬಿಲಿಯನ್ ಸ್ವತ್ತುಗಳು ಬಿಡುಗಡೆಗೊಳಿಸಲಿದೆ ಎಂದು ಇರಾನ್ ಮೂಲಗಳು ತಿಳಿಸಿವೆ.
ಆದರೆ ಈ ಹಂತದಲ್ಲಿ ಯಾವುದೇ ಆಸ್ತಿಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಅಮೆರಿಕ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಆದರೆ ಅಣ್ವಸ್ತ್ರ ವಿಷಯಕ್ಕೆ ಇರಾನ್ ಒಪ್ಪಿಕೊಂಡಿದ್ದೇ ಆದಲ್ಲಿ, ಆ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಎಷ್ಟು ಆಸ್ತಿಯನ್ನು ಬಿಡುಗಡೆ ಮಾಡಲಾಗುವುದು ಎನ್ನುವುದನ್ನು ಅವರು ತಿಳಿಸಿಲ್ಲ.
2015ರಲ್ಲಿ ಬರಾಕ್ ಒಬಾಮಾ ಆಡಳಿತವು ಇರಾನ್‌ನ $1.7 ಕೋಟಿ ಆಸ್ತಿಯನ್ನು ಬಿಡುಗಡೆ ಮಾಡಿದ್ದನ್ನು ಟ್ರಂಪ್ ಇತ್ತೀಚೆಗೆ ಟೀಕಿಸಿದ್ದರು.
ಇರಾನ್-ಅಮೆರಿಕ ಶಾಂತಿ ಮಾತುಕತೆ: ಟೆಹರಾನ್‌ನಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್
ಇರಾನ್ ಬೆಂಬಲಿತ ಬಂಡುಕೋರರು
ಪ್ರದೇಶದಲ್ಲಿ ಇರುವ ಬಂಡುಕೋರರಿಗೆ ಇರಾನ್ ಬೆಂಬಲ ನೀಡುತ್ತಿದೆ. ಅದರಲ್ಲಿಯೂ ಪ್ರಮುಖವಾಗಿ ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ. ಕದನ ವಿರಾಮ ಜಾರಿಯಲ್ಲಿದ್ದರೂ, ಹಿಜ್ಬುಲ್ಲಾ ಹಾಗೂ ಇಸ್ರೇಲ್ ನಡುವೆ ದಾಳಿ-ಪ್ರತಿದಾಳಿ ನಡೆಯುತ್ತಿದೆ.
ಪ್ರಸ್ತಾಪಿತ ಒಪ್ಪಂದದಲ್ಲಿ ಈಗ ನಡೆಯುತ್ತಿರುವ ಕದನ ಅಂತ್ಯಗೊಳ್ಳಲಿದೆಯೇ ಎನ್ನುವ ಪ್ರಶ್ನೆ ಉದ್ಭವಿಸಿದೆ. ಅಲ್ಲದೆ ತನ್ನ ಬೆಂಬಲದಿಂದ ಕಾರ್ಯಾಚರಿಸುತ್ತಿರುವ ಬಂಡುಕೋರರನ್ನು ಇರಾನ್ ನಿಯಂತ್ರಿಸಲಿದೆಯೇ ಎನ್ನುವುದು ಮತ್ತೊಂದು ಪ್ರಶ್ನೆ.
ಪ್ರಸ್ತಾವಿತ ಕದನ ವಿರಾಮದಲ್ಲಿ ಎಲ್ಲಾ ಬಂಡುಕೋರ ದಾಳಿಯೂ ನಿಲ್ಲಲಿದೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಮೆರಿವು ಒಪ್ಪಂದದಲ್ಲಿ ಯಾವುದೇ ಬಂಡುಕೋರರನ್ನು ಹೆಸರಿಸಿಲ್ಲ. ಎಲ್ಲಾ ಬಂಡುಕೋರ ಸಂಘಟನೆಗಳಿಂದ ಎದುರಾಗುವ ಬೆದರಿಕೆಗಳಿಗೆ ಅಂತ್ಯ ಹಾಡಬೇಕು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒತ್ತಾಯಿಸಿದ್ದಾರೆ.
ಒಂದು ಗುರಿ, ಭಿನ್ನ ಮಾರ್ಗ: ಅಮೆರಿಕ, ಚೀನಾದ ಎ.ಐ ಓಟದಲ್ಲಿ ಗೆಲ್ಲುವವರು ಯಾರು?
ಇರಾನ್‌ನ ಕ್ಷಿಪಣಿ ಸಾಮರ್ಥ್ಯ
ಇಸ್ರೇಲ್ ಮತ್ತು ಅಮೆರಿಕದ ಮಿತ್ರ ಗಲ್ಫ್ ಅರಬ್ ರಾಷ್ಟ್ರಗಳ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ಬಳಸಿ ದಾಳಿ ನಡೆಸಿದೆ. ಸಂಘರ್ಷದ ಆರಂಭಿಕ ಹಂತದಲ್ಲಿ, ಇರಾನ್ ತನ್ನ ಕ್ಷಿಪಣಿಗಳನ್ನು ತ್ಯಜಿಸಬೇಕು ಅಥವಾ ಅವುಗಳ ವ್ಯಾಪ್ತಿಯನ್ನು ಮಿತಿಗೊಳಿಸಬೇಕು ಎಂದು ಟ್ರಂಪ್ ಆಡಳಿತವು ಹೇಳಿತ್ತು. ಆದರೆ ಪ್ರಸ್ತುತ ಚರ್ಚೆಯಲ್ಲಿರುವ ಒಪ್ಪಂದವು ಇರಾನ್‌ನ ಕ್ಷಿಪಣಿ ಸಂಗ್ರಹದ ವಿಷಯವನ್ನು ಒಳಗೊಂಡಿಲ್ಲ ಎಂದು ಅಮೆರಿಕದ ಅಧಿಕಾರಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇರಾನ್‌ನ ಕ್ಷಿಪಣಿಗಳನ್ನು ನಿಯಂತ್ರಿಸಬೇಕು ಎಂದು ಇಸ್ರೇಲ್ ಬಯಸಿದೆ. ಇರಾನ್ ಪರಮಾಣು ಅಸ್ತ್ರವನ್ನು ಹೊಂದುವುದನ್ನು ತಡೆಯುವ ನಿಟ್ಟಿನಲ್ಲಿ ತಾವಿಬ್ಬರೂ ಒಂದೇ ನಿಲುವು ಹೊಂದಿದ್ದೇವೆ ಎಂದು ನೆತನ್ಯಾಹು ಭಾನುವಾರ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಪ್ರಸ್ತುತ ಚರ್ಚೆಯಲ್ಲಿರುವ ಈ ಒಪ್ಪಂದವು ಇಸ್ರೇಲ್‌ನ ಉದ್ದೇಶಗಳನ್ನು ಈಡೇರಿಸುವಲ್ಲಿ ಬಹಳ ಹಿಂದೆ ಬೀಳಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಉಲ್ಬಣಗೊಳ್ಳಬಹುದು.

