ನವದೆಹಲಿ: ತಂತ್ರಜ್ಞಾನ ಅಳವಡಿಕೆ ಮೂಲಕ ಪಡಿತರ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಹಾಗೂ ಆಹಾರ ಧಾನ್ಯಗಳ ಕಳ್ಳತನಕ್ಕೆ ಕಡಿವಾಣ ಹಾಕುವ ಉದ್ದೇಶದ 'ಸಾರ್ಥಕ್-ಪಿಡಿಎಸ್'ಯೋಜನೆಯನ್ನು ಮುಂದಿನ ಐದು ವರ್ಷಗಳವರೆಗೆ ವಿಸ್ತರಿಸುವುದಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ(ಸಿಸಿಇಎ) ಸಭೆಯು, ₹25,530 ಕೋಟಿ ಗಾತ್ರದ ಯೋಜನೆಯನ್ನು 2031ರ ಮಾರ್ಚ್ ವರೆಗೆ ವಿಸ್ತರಿಸಲು ಒಪ್ಪಿಗೆ ನೀಡಿತು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್,'ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಹಾರ ಧಾನ್ಯಗಳ ಸಾಗಣೆ ಹಾಗೂ ನಿರ್ವಹಣೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ನೆರವಿಗೆ ಸಂಬಂಧಿಸಿದ ನಿಯಮಗಳ ಪರಿಷ್ಕರಣೆಗೂ ಸಭೆ ಅನುಮೋದನೆ ನೀಡಿತು' ಎಂದು ಹೇಳಿದರು.
'ಆಹಾರ ಧಾನ್ಯಗಳ ಸಾಗಣೆ ವೆಚ್ಚ ಭರಿಸಲು ರಾಜ್ಯಗಳು ಸಂಕಷ್ಟ ಎದುರಿಸುತ್ತಿದ್ದವು. ಈಗ ಹೊಸ ಯೋಜನೆಯಡಿ ರಾಜ್ಯಗಳಿಗೆ ನೆರವು ನೀಡಲಾಗುತ್ತದೆ. ನ್ಯಾಯ ಬೆಲೆ ಅಂಗಡಿಕಾರರಿಗೆ ನೀಡುವ ಗೌರವ ಧನವನ್ನು ಕೂಡ ಹೆಚ್ಚಿಸಲಾಗುತ್ತದೆ' ಎಂದು ತಿಳಿಸಿದರು.

