ತಿರುವನಂತಪುರಂ: ಕೇರಳದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ನಡೆಯುತ್ತಿರುವ ಪೈಪೋಟಿಯಲ್ಲಿ ಸದ್ಯ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು ಮುಂದಿದ್ದಾರೆ.
ಗುರುವಾರ ಎಐಸಿಸಿಯ ಕೇಂದ್ರ ವೀಕ್ಷಕರ ಜೊತೆ ಪ್ರತ್ಯೇಕ ಮಾತುಕತೆಗಳಲ್ಲಿ ಕಾಂಗ್ರೆಸ್‌ನ ಚುನಾಯಿತ 63 ಶಾಸಕರ ಪೈಕಿ ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಸೇರಿದಂತೆ 47 ಜನರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ವೇಣುಗೋಪಾಲ್ ಹೆಸರನ್ನು ಪ್ರಸ್ತಾವಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಪಕ್ಷದ ಹೈಕಮಾಂಡ್ ಈ ವಾರದ ಅಂತ್ಯದೊಳಗೆ ಮುಖ್ಯಮಂತ್ರಿ ಹುದ್ದೆಗೆ ತನ್ನ ಆಯ್ಕೆಯನ್ನು ಪ್ರಕಟಿಸುವ ಸಾಧ್ಯತೆಯಿದೆ.
ಸಂದೀಪ್ ಜಿ. ವಾರಿಯರ್, ಸಂಜೀವ್ ಜೋಸೆಫ್, ಟಿ.ಒ. ಮೋಹನ್ ಮತ್ತು ಉಷಾ ವಿಜಯನ್ ಅವರೂ ವೇಣುಗೋಪಾಲ್ ಅವರ ಪರ ಒಲವು ವ್ಯಕ್ತಪಡಿಸಿದ ಚುನಾಯಿತ ಶಾಸಕರಲ್ಲಿ ಸೇರಿದ್ದಾರೆ. ಸಿಎಂ ಹುದ್ದೆಗೆ ಇನ್ನೋರ್ವ ಸ್ಪರ್ಧಿಯಾಗಿರುವ ರಮೇಶ್ ಚೆನ್ನಿತಲ ಅವರಿಗೆ ಆಘಾತವನ್ನುಂಟು ಮಾಡಿರುವ ಬೆಳವಣಿಗೆಯಲ್ಲಿ ಅವರ ಆಪ್ತ ಐ.ಸಿ. ಬಾಲಕೃಷ್ಣನ್ ಅವರು ಉನ್ನತ ಹುದ್ದೆಗೆ ವೇಣುಗೋಪಾಲ್ ಮತ್ತು ಚೆನ್ನಿತಲ ಇಬ್ಬರಿಗೂ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಾಜಿ ಪ್ರತಿಪಕ್ಷ ನಾಯಕ ಚೆನ್ನಿತಲ ಅವರನ್ನು ಎಂಟು ಚುನಾಯಿತ ಶಾಸಕರು ಬೆಂಬಲಿಸಿದ್ದರೆ, ಹಾಲಿ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಪರ ಆರು ಶಾಸಕರು ಒಲವು ತೋರಿಸಿದ್ದಾರೆ. ಸತೀಶನ್ ಮತ್ತು ಚೆನ್ನಿತಲ ಕೇಂದ್ರ ವೀಕ್ಷಕರನ್ನು ಭೇಟಿಯಾಗಿ ಸಿಎಂ ಹುದ್ದೆಗೆ ಹಕ್ಕು ಮಂಡಿಸಿದ್ದಾರೆ. ವೇಣುಗೋಪಾಲ್ ವೀಕ್ಷಕರನ್ನು ಭೇಟಿಯಾಗಿಲ್ಲ.
ಕೇಂದ್ರ ವೀಕ್ಷಕರಾದ ಅಜಯ್ ಮಾಕೆನ್ ಮತ್ತು ಮುಕುಲ್ ವಾಸ್ನಿಕ್ ಅವರು ಕಾಂಗ್ರೆಸ್ ಸಂಸದರು ಮತ್ತು ಪಕ್ಷದ ಹಿರಿಯ ನಾಯಕರ ಆದ್ಯತೆಯನ್ನು ತಿಳಿದುಕೊಳ್ಳಲು ಅವರೊಂದಿಗೂ ಸಭೆ ನಡೆಸಿದ್ದರು. ಮೂವರು ಮಾಜಿ ಕೆಪಿಸಿಸಿ ಮುಖ್ಯಸ್ಥರು ಸತೀಶನ್‌ರನ್ನು ಬೆಂಬಲಿಸಿದ್ದರೆ, ಹಲವಾರು ಹಿರಿಯ ನಾಯಕರು ವೇಣುಗೋಪಾಲ್ ಪರ ಬೆಂಬಲ ವ್ಯಕ್ತಪಡಿಸಿದ್ದಾರೆ. ದಿಲ್ಲಿಗೆ ಮರಳಿರುವ ವೀಕ್ಷಕರು ಪಕ್ಷಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ತಮ್ಮ ವರದಿಯನ್ನು ಸಲ್ಲಿಸಲಿದ್ದಾರೆ. ಹೈಕಮಾಂಡ್ ಅಗತ್ಯವಿದ್ದರೆ ಸನ್ನಿ ಜೋಸೆಫ್, ಮೂವರು ಕೆಪಿಸಿಸಿ ಕಾರ್ಯಾಧ್ಯಕ್ಷರು, ಸತೀಶನ್ ಮತ್ತು ಚೆನ್ನಿತಲ ಅವರನ್ನು ಮಾತುಕತೆಗೆ ಕರೆಯಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಈ ನಡುವೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯು ಮುಂದಿನ ಮುಖ್ಯಮಂತ್ರಿಯನ್ನು ಹೆಸರಿಸಲು ಖರ್ಗೆಯವರಿಗೆ ಅಧಿಕಾರ ನೀಡಿದೆ. ಸೂಕ್ತ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಹೈಕಮಾಂಡ್ ಶನಿವಾರ ಅಥವಾ ರವಿವಾರ ಮುಂದಿನ ಮುಖ್ಯಮಂತ್ರಿಯನ್ನು ಘೋಷಿಸಲಿದೆ. ನಂತರ ಎರಡು ದಿನಗಳಲ್ಲಿ ನೂತನ ಮುಖ್ಯಮಂತ್ರಿಗಳು ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಇತರ ಯುಡಿಎಫ್ ಪಕ್ಷಗಳ ನಾಯಕರೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

