ಇಂದೋರ್: ತಿರುವನಂತಪುರಂ-ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್‌ನ ಎಸಿ ಬೋಗಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ ರೈಲು ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.
68 ಪ್ರಯಾಣಿಕರಿದ್ದ ರೈಲಿನ (12431) ಬಿ-1 ಬೋಗಿಯಲ್ಲಿ ಬೆಳಿಗ್ಗೆ 5.15ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ. ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ ಎಂದು ರೈಲ್ವೆಯ ಹಿರಿಯ ವಾಣಿಜ್ಯ ವ್ಯವಸ್ಥಾಪಕಿ ಸೌರ್ಬಾ ಜೈನ್ ತಿಳಿಸಿದ್ದಾರೆ.
ರೈಲ್ವೆಯ ಕೋಟ ವಿಭಾಗದ ಅಡಿಯಲ್ಲಿ ಅಲೋಟ್ ಮತ್ತು ಲುನಿರಿಚಾ ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದೆ ಎಂದು ರತ್ಲಂ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮುಖೇಶ್ ಕುಮಾರ್ ತಿಳಿಸಿದ್ದಾರೆ.
ಬೆಂಕಿ ಹೊತ್ತಿಕೊಂಡಿದ್ದ ಕೋಚ್ ಅನ್ನು ರೈಲಿನಿಂದ ಬೇರ್ಪಡಿಸಲಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಓವರ್‌ಹೆಡ್ ವಿದ್ಯುತ್ ಸರಬರಾಜನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು ಎಂದೂ ತಿಳಿಸಿದ್ದಾರೆ.
ಬೋಗಿಯಲ್ಲಿದ್ದ ಯಾವುದೇ ಪ್ರಯಾಣಿಕನಿಗೆ ಗಾಯಗಳಾಗಿಲ್ಲ. ಕೋಟವರೆಗೆ ಅವರ ಪ್ರಯಾಣಕ್ಕೆ ಪರ್ಯಾಯ ಮಾರ್ಗ ಹುಡುಕಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

