ನವದೆಹಲಿ: ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದಗಳನ್ನು ಬಗೆಹರಿಸಲು ನ್ಯಾಯಮಂಡಳಿ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆರು ತಿಂಗಳ ಕಾಲಾವಕಾಶ ನೀಡಿದೆ.
ಜಲವಿವಾದ ಬಗೆಹರಿಸಲು ಒಂದು ತಿಂಗಳಲ್ಲಿ ನ್ಯಾಯಮಂಡಳಿ ರಚಿಸಬೇಕು ಎಂದು ನ್ಯಾಯಮೂರ್ತಿ ವಿಕ್ರಮ್‌ನಾಥ್ ನೇತೃತ್ವದ ಪೀಠವು ಜಲಶಕ್ತಿ ಸಚಿವಾಲಯಕ್ಕೆ ಫೆಬ್ರುವರಿ 2ರಂದು ನಿರ್ದೇಶನ ನೀಡಿತ್ತು.
ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದ ಜಲಶಕ್ತಿ ಸಚಿವಾಲಯ, 'ನ್ಯಾಯಮಂಡಳಿ ರಚನೆಗೆ ಆರು ತಿಂಗಳ ಕಾಲಾವಕಾಶ ನೀಡಬೇಕು' ಎಂದು ಮನವಿ ಮಾಡಿತ್ತು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠ ಶುಕ್ರವಾರ ಪುರಸ್ಕರಿಸಿತು. ಈ ವಿಷಯದಲ್ಲಿ ಸರ್ಕಾರವು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಭಾಟಿ ಅವರು ಪೀಠದ ಗಮನಕ್ಕೆ ತಂದರು.
ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ನಿಶಾಂತ್ ಪಾಟೀಲ. 'ಇದೊಂದು ಸಣ್ಣ ಜಲವಿವಾದ' ಎಂದರು. 'ನ್ಯಾಯಪೀಠದ ನಿರ್ದೇಶನ ಪಾಲಿಸಲು ಸಚಿವಾಲಯವು ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ನ್ಯಾಯಮಂಡಳಿ ರಚನೆಗೆ ಅಂತರ್ ಇಲಾಖೆಗಳ ಜತೆಗೆ ಸಮಾಲೋಚನೆ ನಡೆಸಲಾಗಿದೆ. ವಿವಿಧ ಇಲಾಖೆಗಳ ಅಭಿಪ್ರಾಯ ಪಡೆದು ಸಚಿವ ಸಂಪುಟ ಟಿಪ್ಪಣಿ ಸಿದ್ಧಪಡಿಸಲಾಗಿದೆ. ಕೇಂದ್ರ ಸಚಿವ ಸಂಪುಟದ ಪರಿಗಣನೆಗೆ ಕರಡು ಟಿಪ್ಪಣಿಯನ್ನು ಸಂಪುಟ ಕಾರ್ಯದರ್ಶಿ ಅವರಿಗೆ ಕಳುಹಿಸಲಾಗಿದೆ' ಎಂದು ಜಲಶಕ್ತಿ ಸಚಿವಾಲಯವು ಅರ್ಜಿಯಲ್ಲಿ ತಿಳಿಸಿತ್ತು.
'ಸಂಪುಟದ ಅನುಮೋದನೆಯ ನಂತರ, ಅಂತರರಾಜ್ಯ ನದಿ ನೀರು ವಿವಾದ ಕಾಯ್ದೆ- 1956ರ ಪ್ರಕಾರ ನ್ಯಾಯಮಂಡಳಿಗೆ ಅಧ್ಯಕ್ಷರು ಮತ್ತು ಸದಸ್ಯರ ಹುದ್ದೆಗೆ ನಾಮನಿರ್ದೇಶನ ಮಾಡುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಅವರಿಗೆ ಕೋರಿಕೆ ಸಲ್ಲಿಸಲಾಗುತ್ತದೆ. ನಾಮನಿರ್ದೇಶನ ಮಾಡಿದ ನಂತರ, ಕರಡು ಅಧಿಸೂಚನೆಯನ್ನು ಕಾನೂನು ವ್ಯವಹಾರಗಳ ಸಚಿವಾಲಯ ಸಿದ್ಧಪಡಿಸುತ್ತದೆ. ಆ ನಂತರ, ನ್ಯಾಯಮಂಡಳಿ ರಚನೆಯ ಅಧಿಸೂಚನೆ ಹೊರಡಿಸಲಾಗುತ್ತದೆ.ಈ ಪ್ರಕ್ರಿಯೆಗಳನ್ನು ನಡೆಸಲು ಸಮಯಾವಕಾಶ ಬೇಕಾಗುತ್ತದೆ' ಎಂದು ಸಚಿವಾಲಯ ತಿಳಿಸಿತ್ತು.

