ನವದೆಹಲಿ: ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳವನ್ನು ತೆಕ್ಕೆಗೆ ತೆಗೆದುಕೊಂಡಿರುವ ಬಿಜೆಪಿ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿ ಮೊದಲ ಬಾರಿಗೆ ಸರ್ಕಾರ ರಚಿಸಿದೆ.
ಈ ಮೂಲಕ 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಒಂಬತ್ತು ರಾಜ್ಯಗಳಲ್ಲಿ ಮೊದಲ ಬಾರಿಗೆ ಬಿಜೆಪಿ ಮುಖ್ಯಮಂತ್ರಿ ಹುದ್ದೆಯನ್ನು ಪಡೆದುಕೊಂಡಿದೆ.
ಮೊದಲ ಬಾರಿಗೆ ಬಿಜೆಪಿ ಮುಖ್ಯಮಂತ್ರಿ ಆಯ್ಕೆಯಾದ ರಾಜ್ಯಗಳಲ್ಲಿ ಹರಿಯಾಣ ಮತ್ತು ಮಹಾರಾಷ್ಟ್ರ ಕಾಣಸಿಗುತ್ತವೆ. 2014ರಲ್ಲಿ ಮೊದಲ ಬಾರಿ ಬಿಜೆಪಿ ಇಲ್ಲಿ ಸರ್ಕಾರ ರಚಿಸಿತು. ನಂತರ 2016ರಲ್ಲಿ ಅಸ್ಸಾಂ, ಅರುಣಾಚಲ ಪ್ರದೇಶ, 2017ರಲ್ಲಿ ಮಣಿಪುರ, 2018ರಲ್ಲಿ ತ್ರಿಪುರ, 2024ರಲ್ಲಿ ಒಡಿಶಾ, 2026ರಲ್ಲಿ ಬಿಹಾರ ಮತ್ತು ಪಶ್ಚಿಮ ಬಂಗಾಳ.
ಹರಿಯಾಣದಲ್ಲಿ ಪೂರ್ಣ ಬಹುಮತದೊಂದಿಗೆ ಗೆದ್ದ ಬಿಜೆಪಿ, ಮನೋಹರ ಲಾಲ್ ಖಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು. ಮಹಾರಾಷ್ಟ್ರದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಳಿಕ ಮಹಾಯುತಿಯೊಂದಿಗೆ ಮೈತ್ರಿ ಮಾಡಿಕೊಂಡು ದೇವೇಂದ್ರ ಫಡಣವೀಸ್ ಅವರನ್ನು ಸಿಎಂ ಗಾದಿಗೆ ಏರಿಸಿತು.
2016ರಲ್ಲಿ ಅಸ್ಸಾಂನಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ತನ್ನ ವಿಜಯ ಯಾತ್ರೆಯನ್ನು ಈಶಾನ್ಯಕ್ಕೂ ವಿಸ್ತರಿಸಿತ್ತು. ಅಸ್ಸಾಂನಲ್ಲಿ ಬಿಜೆಪಿಯ ಮೊದಲ ಸಿಎಂ ಆಗಿ ಸರ್ಬಾನಂದ ಸೊನೊವಾಲ್ ಅಧಿಕಾರಕ್ಕೇರಿದರು.
ಆ ಬಳಿಕವೂ ಅಸ್ಸಾಂನಲ್ಲಿ ಅಧಿಕಾರ ಉಳಿಸಿಕೊಂಡಿರುವ ಬಿಜೆಪಿ, 2026ರಲ್ಲಿ ನಡೆದ ವಿಧಾನಸಭಾ ಚುನಾವಣೆಯೂ ಸೇರಿದಂತೆ ಸತತ ಎರಡು ಚುನಾವಣೆಗಳಲ್ಲಿ ಗೆದ್ದು ಮೂರನೇ ಬಾರಿ ಸರ್ಕಾರ ರಚಿಸಿದೆ.
ಅದೇ ವರ್ಷ ಅಂದರೆ 2016ರಲ್ಲಿ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚಿಸಿತು. 2016ರ ಜುಲೈನಲ್ಲಿ, ಕಾಂಗ್ರೆಸ್ ನಾಯಕ ಪೆಮಾ ಖಂಡು ದೀರ್ಘಕಾಲದ ರಾಜಕೀಯ ಬಿಕ್ಕಟ್ಟಿನ ನಡುವೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು, ಆದರೆ ಸೆಪ್ಟೆಂಬರ್‌ನಲ್ಲಿ ಅವರು ಮತ್ತು ಹಲವು ಕಾಂಗ್ರೆಸ್ ಶಾಸಕರು ಬಿಜೆಪಿಯ ಮಿತ್ರ ಪಕ್ಷವಾದ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ (ಪಿಪಿಎ) ಗೆ ಸೇರಿದರು.
ಕೆಲವು ತಿಂಗಳುಗಳ ನಂತರ, 2016ರ ಡಿಸೆಂಬರ್‌ನಲ್ಲಿ, ಖಂಡು 33 ಶಾಸಕರೊಂದಿಗೆ ಬಿಜೆಪಿ ಸೇರಿದರು, ಇದರಿಂದಾಗಿ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯಿತು. ರಾಜ್ಯದಲ್ಲಿ ಮೊದಲ ಸ್ಥಿರ ಸರ್ಕಾರ ರಚನೆಯಾಯಿತು.
ಹಾಗೆ ನೋಡಿದರೆ, 2003ರಲ್ಲಿ ಅರುಣಾಚಲ ಪ್ರದೇಶದಲ್ಲಿ ಗೆಗಾಂಗ್ ಅಪಾಂಗ್ ನೇತೃತ್ವದಲ್ಲಿ ಬಿಜೆಪಿ ಅಲ್ಪಾವಧಿಗೆ ಸರ್ಕಾರವನ್ನು ಮುನ್ನಡೆಸಿತ್ತು. ಆ ಸಮಯದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಅಪಾಂಗ್, ಕಾಂಗ್ರೆಸ್‌ಗೆ ಮರಳುವ ಮೊದಲು ಕೇವಲ 44 ದಿನಗಳ ಕಾಲ ಸರ್ಕಾರವನ್ನು ಮುನ್ನಡೆಸಿದ್ದರು..
2017ರಲ್ಲಿ ಮಣಿಪುರದಲ್ಲಿ ಚುನಾವಣೋತ್ತರ ಒಕ್ಕೂಟಗಳಾದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ), ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಮತ್ತು ಇತರ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿಕೊಂಡ ಬಿಜೆಪಿ ಸರ್ಕಾರ ರಚಿಸಿ ಎನ್. ಬಿರೇನ್ ಸಿಂಗ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು.
2018ರಲ್ಲಿ, ಬಿಜೆಪಿ ತ್ರಿಪುರದಲ್ಲಿ ಎಡರಂಗದ ದಶಕಗಳ ಕಾಲದ ಆಳ್ವಿಕೆಯನ್ನು ಕೊನೆಗೊಳಿಸಿ ಬಿಪ್ಲಬ್ ಕುಮಾರ್ ದೇಬ್ ನೇತೃತ್ವದಲ್ಲಿ ತನ್ನ ಮೊದಲ ಸರ್ಕಾರವನ್ನು ರಚಿಸಿತು.
2024ರಲ್ಲಿ ಬಿಜೆಪಿ ಒಡಿಶಾದಲ್ಲಿ ಬಿಜು ಜನತಾ ದಳವನ್ನು ಸೋಲಿಸಿ, ನವೀನ್ ಪಟ್ನಾಯಕ್ ಅವರ 24 ವರ್ಷದ ಆಡಳಿತವನ್ನು ಕೊನೆಗೊಳಿಸಿ ಸರ್ಕಾರ ರಚಿಸಿತ್ತು. ಮೋಹನ್ ಚರಣ್ ಮಾಜಿ ಅವರನ್ನು ಒಡಿಶಾದ ಮೊದಲ ಬಿಜೆಪಿ ಸಿಎಂ ಆಗಿ ನೇಮಕ ಮಾಡಲಾಗಿದೆ.
ಬಿಹಾರದಲ್ಲಿ ನಿತೀಶ್ ಕುಮಾರ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಎನ್‌ಡಿಎ ನಿತೀಶ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. 2026ರಲ್ಲಿ ನಿತೀಶ್ ರಾಜ್ಯಸಭೆಗೆ ಚುನಾಯಿತರಾದ ಕಾರಣ ಸಾಮ್ರಾಟ್ ಚೌಧರಿ ಅವರನ್ನು ಬಿಜೆಪಿಯ ಮೊದಲ ಮುಖ್ಯಮಂತ್ರಿಯನ್ನಾಗಿ ಮಾಡಿತು.
ಈಗ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸಿ ಸುವೇಂದು ಅಧಿಕಾರಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, 'ಬಿಜೆಪಿ-ಎನ್‌ಡಿಎ ದೇಶದಾದ್ಯಂತ ಸುಮಾರು 21-22 ಸರ್ಕಾರಗಳನ್ನು ಹೊಂದಿದೆ. ಪ್ರಧಾನಿ ಮೋದಿ ಈಗ ಆಡಳಿತ ಪರವಾದ ನಿಲುವಿಗೆ ಸಮಾನಾರ್ಥಕವಾಗಿದ್ದಾರೆ. ಕಳೆದ ಕೆಲವು ಚುನಾವಣೆಗಳಲ್ಲಿ, ಅಸ್ಸಾಂ ಮತ್ತು ಪುದುಚೆರಿಯಂತಹ ರಾಜ್ಯಗಳಲ್ಲಿ ಬಿಜೆಪಿ-ಎನ್‌ಡಿಎ ಸರ್ಕಾರಗಳು ಮತ್ತೆ ಅಧಿಕಾರಕ್ಕೆ ಬಂದಿವೆ' ಎಂದಿದ್ದಾರೆ.

