ಜಿನೆವಾ: ಅಟ್ಲಾಂಟಿಕ್ ಸಾಗರದಲ್ಲಿ ಸಂಚರಿಸುತ್ತಿದ್ದ ಕ್ರೂಸ್ ಹಡಗಿನಲ್ಲಿ ವರದಿಯಾದ ಹಾಂಟವೈರಸ್ ಸೋಂಕಿಗೆ ಸಂಬಂಧಿಸಿದ 8 ಪ್ರಕರಣಗಳು ಪತ್ತೆಯಾಗಿದ್ದು, ಜಾಗತಿಕ ಸಂಪರ್ಕ ಪತ್ತೆಹಚ್ಚುವಿಕೆ ಕಾರ್ಯಕ್ಕೆ ಚಾಲನೆ ನೀಡಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ತಿಳಿಸಿದೆ.
ಜಾಗತಿಕ ಆರೋಗ್ಯ ಅಧಿಕಾರಿಗಳು ಸಂಪರ್ಕವನ್ನು ಪತ್ತೆಹಚ್ಚುವ ಮತ್ತು ವೈರಸ್ ಮತ್ತಷ್ಟು ಹರಡುವುದನ್ನು ತಡೆಯಲು ಪ್ರಯತ್ನವನ್ನು ತೀವ್ರಗೊಳಿಸಿದ್ದಾರೆ. ಅಟ್ಲಾಂಟಿಕ್ ಸಾಗರದಲ್ಲಿ ಸಂಚರಿಸುತ್ತಿದ್ದ ಕ್ರೂಸ್ ಹಡಗಿನಲ್ಲಿ ವರದಿಯಾದ ಹಾಂಟವೈರಸ್ ಸೋಂಕಿನಿಂದ ಮೂವರು ಸಾವನ್ನಪ್ಪಿದ್ದು, ಇತರ ನಾಲ್ವರು ತೀವ್ರ ಅಸ್ವಸ್ಥಗೊಂಡಿದ್ದಾರೆ.
ಹಡಗಿನಲ್ಲಿದ್ದ ಸ್ವಿಟ್ಜರ್‌ಲ್ಯಾಂಡ್ ನ ಪ್ರಜೆಯೊಬ್ಬರು ಸ್ವದೇಶಕ್ಕೆ ಮರಳಿದ ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಾಗ ಸೋಂಕಿನ ಲಕ್ಷಣ ದೃಢಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಾಂಟವೈರಸ್ ಎಂದರೆ ಇಲಿ ಮತ್ತು ಇತರ ದಂಶಕಗಳ ಮೂತ್ರ, ಮಲ ಅಥವಾ
ಜೊಲ್ಲಿನಿಂದ ಹರಡುವ ಮಾರಕ ಸೋಂಕಾಗಿದ್ದು, ಮನುಷ್ಯರಲ್ಲಿ ತೀವ್ರ ಉಸಿರಾಟದ ತೊಂದರೆ ಮತ್ತು ಮೂತ್ರಪಿಂಡದ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

