ಕಾಸರಗೋಡು: ಬೇಕಲ ಪೆರಿಯ ಗೋಕುಲಂ ಗೋಶಾಲೆಯಲ್ಲಿ ಆಯೋಜಿಸಲಾಗಿರುವ ವೈಶಾಖ ನಟನಂ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ದಕ್ಷಿಣ ಅಮೆರಿಕಾದ ಪೆರು ದೇಶದ ಕಲಾವಿದೆ ಅನಂಗ ಮಂಜರಿ ಗೊನ್ಸಾಲೇಸ್ ಅವರು ನಂದಿ ಮಂಟಪದಲ್ಲಿ ಭರತನಾಟ್ಯ ಪ್ರದರ್ಶಿಸಿದರು.
ಗೊನ್ಸಾಲೇಸ್ ಅವರ ಅಭಿನಯ ಮತ್ತು ತಾಳಲಯಬದ್ಧ ನೃತ್ಯ ಪ್ರದರ್ಶನವು ನೆರೆದಿದ್ದ ಕಲಾಭಿಮಾನಿಗಳ ಮನಸೂರೆಗೊಂಡಿತು. ಡಾ. ಜಾನಕಿ ರಂಗರಾಜ್ ಅವರ ಶಿಷ್ಯೆಯಾಗಿರುವ ಇವರು, ಮುಂದಿನ ವರ್ಷದ ವೈಶಾಖ ನಟನಂ ಕಾರ್ಯಕ್ರಮದಲ್ಲಿಯೂ ಪಾಲ್ಗೊಳ್ಳುವ ಆಶಯದೊಂದಿಗೆ ನೃತ್ಯ ನಮನ ಸಲ್ಲಿಸಿದರು. ಹೊಂಗ್‍ಕಾಂಗ್‍ನಿಂದ ಆಗಮಿಸಿದ್ದ ಸಂಜಯ್ ವಡಪಳ್ಳಿ ಅವರು ನಂದಿ ಮಂಟಪದಲ್ಲಿ ನೃತ್ಯಾರ್ಚನೆ ನಡೆಸಿಕೊಟ್ಟರು. ಮುಳಿಯ ಕುಟುಂಬದ ಆದ್ಯ ಸುಲೋಚನ, ಶಾರ್ವರಿ ಮಯ್ಯ ಹಾಗೂ ಮೈಸೂರಿನ ಡಾ. ಕೆ. ಕುಮಾರ್ ಸೇರಿದಂತೆ ಹಲವು ಗಣ್ಯ ಕಲಾವಿದರು ನೃತ್ಯ ವೈವಿಧ್ಯಗಳನ್ನು ಪ್ರಸ್ತುತಪಡಿಸಿದರು. ನೃತ್ಯೋತ್ಸವದ ಅಂಗವಾಗಿ ನಂದಿ ಮಂಟಪ ಮತ್ತು ಧೇನು ಮಂಟಪಗಳಲ್ಲಿ ಭರತನಾಟ್ಯ, ಮೋಹಿನಿಯಾಟ್ಟಂ, ಕೂಚಿಪುಡಿ, ಕೇರಳ ನಟನಂ, ಕಥಕ್ ಹಾಗೂ ತಿರುವಾದಿರಕ್ಕಳಿ ಸೇರಿದಂತೆ ವಿವಿಧ ಶಾಸ್ತ್ರೀಯ ಮತ್ತು ಸಾಂಪ್ರದಾಯಿಕ ನೃತ್ಯ ಪ್ರಕಾರಗಳು ಸಾಂಗವಾಗಿ ನೆರವೇರಿತು.

.jpg)
.jpg)
