ನವದೆಹಲಿ: ಭಾರತದಲ್ಲಿ (ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡೈಲಾಗ್) ಕ್ವಾಡ್ ದೇಶಗಳ ವಿದೇಶಾಂಗ ಸಚಿವರ ಸಭೆ ಇದೇ 26ರಂದು ಮಂಗಳವಾರ ದೆಹಲಿಯಲ್ಲಿ ನಡೆಯಲಿದೆ.
ಪಶ್ಚಿಮ ಏಷ್ಯಾ ಯುದ್ಧದ ನಡುವೆಯೂ ಭಾರತವು ಕ್ವಾಡ್ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯ ಆತಿಥ್ಯ ವಹಿಸಿದ್ದು ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮಗಳು ಮತ್ತು ಇಂಡೊ-ಪೆಸಿಫಿಕ್ ಭಾಗದ ಪ್ರಸ್ತುತ ಪರಿಸ್ಥಿತಿಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಆಸ್ಟ್ರೇಲಿಯಾ ವಿದೇಶಾಂಗ ಸಚಿವೆ ಪೆನ್ನಿ ವಾಂಗ್, ಜಪಾನ್ ವಿದೇಶಾಂಗ ಸಚಿವರಾದ ತೋಷಿಮಿಟ್ಸು ಮೊಟೆಗಿ ಪಾಲ್ಗೊಳ್ಳಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಸಚಿವ ಎಸ್.ಜೈಶಂಕರ್ ವಹಿಸಲಿದ್ದಾರೆ ಎಂದು ಭಾರತದ ವಿದೇಶಾಂಗ ಇಲಾಖೆ ತಿಳಿಸಿದೆ.
ರುಬಿಯೋ, ವಾಂಗ್ ಮತ್ತು ಮೊಟೆಗಿ ಅವರು ಜೈಶಂಕರ್ ಅವರೊಂದಿಗೆ ಪ್ರತ್ಯೇಕವಾಗಿ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಆದ್ಯತಾ ವಲಯಗಳಲ್ಲಿ ಕ್ವಾಡ್ ರಾಷ್ಟ್ರಗಳ (ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ಒಳಗೊಂಡ ರಾಜತಾಂತ್ರಿಕ ವೇದಿಕೆ) ಸಹಕಾರದ ಬಗ್ಗೆಯೂ ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ.
ಉಕ್ರೇನ್, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಸೇರಿದಂತೆ ಜಾಗತಿಕ ಸವಾಲುಗಳ ಕುರಿತು ಕ್ವಾಡ್ ವೇದಿಕೆಯಲ್ಲಿ ಸಚಿವರು ಚರ್ಚಿಸಲಿದ್ದಾರೆ. ಏಷ್ಯಾ-ಪೆಸಿಫಿಕ್ ಭಾಗದಲ್ಲಿ ಹೆಚ್ಚುತ್ತಿರುವ ಚೀನಾದ ಬಿಗಿಹಿಡಿತ ವಿಚಾರವೂ ಪ್ರಸ್ತಾಪ ಆಗುವ ಸಾಧ್ಯತೆ ಇದೆ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

