ಕಾಸರಗೋಡು: ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ಕಾಞಂಗಾಡ್ ನಗರಸಭಾ ವ್ಯಾಪ್ತಿಯ ಪೇಟೆ ಮತ್ತು ವಿವಿಧ ವಾರ್ಡ್ಗಳಲ್ಲಿ ಮಳೆಗಾಲ ಪೂರ್ವ ಶುಚೀಕರಣಕಾರ್ಯ ಮತ್ತು ಜಾಗೃತಿ ಅಭಿಯಾನ ಆಯೋಜಿಸಲಾಯಿತು. ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗುವ ಪರಿಸ್ಥಿತಿಗಳನ್ನು ನಿವಾರಿಸುವ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿರಿಸುವ ಉದ್ದೇಶದಿಂದ ಸಾರ್ವಜನಿಕರ ಭಾಗವಹಿಸುವಿಕೆಯೊಂದಿಗೆ ಶುಚೀಕರಣ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು. ನಗರಸಭಾ ಅಧ್ಯಕ್ಷ ವಿ.ವಿ. ರಮೇಶನ್, ಉಪಾಧ್ಯಕ್ಷೆ ಲತಾ ಬಾಲಕೃಷ್ಣನ್ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಯಿತು. ನಗರಸಭೆಯ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಮತ್ತು ವಾರ್ಡ್ ಕೌನ್ಸಿಲರ್ಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ಶುಚೀಕರಣ ಚಟುವಟಿಕೆಗೆ ನೇತೃತ್ವ ನೀಡಿದರು.
ನಗರಸಭೆಯ ವ್ಯಾಪ್ತಿಯೊಳಗಿನ ಸಾರ್ವಜನಿಕ ಸ್ಥಳಗಳು ಮತ್ತು ರಸ್ತೆಬದಿಗಳನ್ನು ಸ್ವಚ್ಛಗೊಳಿಸುವುದರ ಜತೆಗೆ ಜನರಿಗೆ ಶುಚೀಕರಣದ ಬಗ್ಗೆ ಬೋಧನೆ ನೀಡಲಾಯಿತು. ಹಸಿರುಕ್ರಿಯಾ ಸೇನಾ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಕಾಞಂಗಾಡು ನಗರದಲ್ಲಿ ನಡೆದ ಶುಚೀಕರಣ ಅಭಿಯಾನ ಜನರಲ್ಲಿ ತಮ್ಮ ಮನೆಗಳು, ಸಂಸ್ಥೆಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ತ್ಯಾಜ್ಯ ಮುಕ್ತವಾಗಿಡುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡಿತು. ಮುಂದಿನ ದಿನಗಳಲ್ಲಿ ವಾರ್ಡ್ ಪ್ರದೇಶವನ್ನು ನಿರಂತರ ಕೇಂದ್ರೀಕರಿಸುವ ಮೂಲಕ ಶುಚೀಕರಣ ಚಟುವಟಿಕೆಗಳನ್ನು ಮುಂದುವರಿಸಲು ನಗರಸಭೆ ತೀರ್ಮಾನಿಸಿತು.



