ಭುವನೇಶ್ವರ: ಒಡಿಶಾದ ಪ್ರಾದೇಶಿಕ ಪಕ್ಷವಾದ ಬಿಜು ಜನತಾ ದಳಕ್ಕೆ (ಬಿಜೆಡಿ) ಭಾರಿ ಹಿನ್ನಡೆಯಾಗಿದೆ. ಪಕ್ಷದಲ್ಲಿ ತಮ್ಮನ್ನು ವ್ಯವಸ್ಥಿತವಾಗಿ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಡಿ ರಾಜ್ಯಸಭಾ ಸಂಸದ ದೆಬಾಶಿಶ್ ಸಮಂತರಾಯ್ ಅವರು ಸೋಮವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ನಡುವೆ ಅವರು ಶೀಘ್ರದಲ್ಲೇ ಬಿಜೆಪಿ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸಮಂತರಾಯ್ ಅವರು ಪಕ್ಷದ ಮುಖ್ಯಸ್ಥ ನವೀನ್ ಪಟ್ನಾಯಕ್ ಅವರಿಗೆ ಪತ್ರ ಬರೆದಿದ್ದು, ಇತ್ತೀಚಿನ ದಿನಗಳಲ್ಲಿ ಪಕ್ಷದಲ್ಲಿ ನನ್ನನ್ನು ವ್ಯವಸ್ಥಿತವಾಗಿ ಕಡೆಗಣಿಸಲಾಗುತ್ತಿದೆ. ಪಕ್ಷಕ್ಕೆ ನನ್ನ ಸೇವೆಯ ಅಗತ್ಯವಿಲ್ಲ ಎಂದು ನನಗೆ ಅನಿಸುತ್ತಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ನಾನು ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.
ಸರಣಿ ರಾಜೀನಾಮೆ ಆಘಾತ
ಕೆಲವು ತಿಂಗಳುಗಳ ಹಿಂದಷ್ಟೇ ಬಿಜೆಡಿಯ ಇಬ್ಬರು ರಾಜ್ಯಸಭಾ ಸಂಸದರಾದ ಸುಜೀತ್ ಕುಮಾರ್ ಮತ್ತು ಮಮತಾ ಮಹಾಂತ ಅವರು ಪಕ್ಷವನ್ನು ತೊರೆದಿದ್ದರು. ಬಳಿಕ ಅವರಿಬ್ಬರೂ ಬಿಜೆಪಿ ಟಿಕೆಟ್‌ನಲ್ಲಿ ಮತ್ತೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇದೀಗ ಸಮಂತರಾಯ್ ಅವರ ನಿರ್ಗಮನದೊಂದಿಗೆ, ರಾಜ್ಯಸಭೆಯಲ್ಲಿ ಬಿಜೆಡಿಯ ಬಲ 5ಕ್ಕೆ ಕುಸಿಯುವ ಸಾಧ್ಯತೆಯಿದೆ.
2009 ಮತ್ತು 2014ರಲ್ಲಿ ಎರಡು ಬಾರಿ ಶಾಸಕರಾಗಿದ್ದ ಸಮಂತರಾಯ್, ಏಪ್ರಿಲ್ 2024ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಮಾಜಿ ಐಎಎಸ್ ಅಧಿಕಾರಿ ಹಾಗೂ ರಾಜಕಾರಣಿ ವಿ.ಕೆ ಪಾಂಡಿಯನ್ ಅವರ ಕಟು ವಿಮರ್ಶಕರಾಗಿದ್ದ ಇವರು, 2024ರ ಲೋಕಸಭೆ ಮತ್ತು ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿ ಸೋತ ನಂತರ ಪಾಂಡಿಯನ್ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದರೂ, ತೆರೆಮರೆಯಿಂದ ಪಕ್ಷದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಬಿಜೆಡಿಯು ಮಾಜಿ ಸಿಎಂ ಬಿಜು ಪಟ್ನಾಯಕ್ ಅವರ ಸಿದ್ಧಾಂತ ಮತ್ತು ತತ್ವಗಳಿಂದ ದೂರ ಸರಿದಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದರು.
'ನನ್ನನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಕ್ಕಾಗಿ ಮತ್ತು ಕಟಕ್ ಜಿಲ್ಲೆಯ ಜನರ ಸೇವೆ ಮಾಡಲು ಹಾಗೂ ರಾಷ್ಟ್ರಮಟ್ಟದಲ್ಲಿ ಒಡಿಶಾದ ಸಮಸ್ಯೆಗಳನ್ನು ಎತ್ತಿಹಿಡಿಯಲು ಅವಕಾಶ ನೀಡಿದ್ದಕ್ಕಾಗಿ ನವೀನ್ ಪಟ್ನಾಯಕ್ ಅವರಿಗೆ ನಾನು ಸದಾ ಋಣಿಯಾಗಿದ್ದೇನೆ' ಎಂದು ದೆಬಾಶಿಶ್ ಸಮಂತರಾಯ್ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬಿಜೆಡಿ ತಿರುಗೇಟು
ಸಮಂತರಾಯ್ ಅವರ ರಾಜೀನಾಮೆಯಿಂದ ಪಕ್ಷಕ್ಕೆ ಯಾವುದೇ ಹಿನ್ನಡೆಯಾಗಿಲ್ಲ, ಬದಲಿಗೆ ಕಟಕ್‌ನಲ್ಲಿ ಸಂಘಟನೆ ಇನ್ನಷ್ಟು ಬಲಗೊಳ್ಳಲಿದೆ ಎಂದು ಬಿಜೆಡಿ ಸಮರ್ಥಿಸಿಕೊಂಡಿದೆ.
ವಿರೋಧ ಪಕ್ಷದ ಮುಖ್ಯ ಸಚೇತಕಿ ಪ್ರಮೀಳಾ ಮಲ್ಲಿಕ್ ಈ ಕುರಿತು ಪ್ರತಿಕ್ರಿಯಿಸಿ, 'ಅವರು ತಮ್ಮ ವ್ಯಾಪಾರದ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಪಕ್ಷವನ್ನು ತೊರೆದಿದ್ದಾರೆ. ಅವರು ರಾಜಕಾರಣದಲ್ಲಿರುವುದು ವ್ಯವಹಾರ ಮಾಡುವುದಕ್ಕಾಗಿಯೇ ಹೊರತು ಜನರ ಸೇವೆಗಲ್ಲ. ಬಿಜೆಡಿ ಅಧಿಕಾರದಲ್ಲಿದ್ದಾಗ ಎಲ್ಲಾ ಸೌಲಭ್ಯಗಳನ್ನು ಅನುಭವಿಸಿ, ಇದೀಗ ಪಕ್ಷ ತೊರೆದು ಹೋಗುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ.

