ನವದೆಹಲಿ: ಮೂರು ವರ್ಷ ಒಳಗಿನ ಮಕ್ಕಳ ಪೈಕಿ, ಜನಿಸಿದ ಒಂದು ಗಂಟೆ ಒಳಗಾಗಿ ಎದೆಹಾಲು ಉಣಿಸಲಾದ ಶಿಶುಗಳ ಪ್ರಮಾಣದಲ್ಲಿ ಶೇ10 ಅಂಶಗಳಷ್ಟು ಏರಿಕೆಯಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ.
ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಳವಾಗಿರುವುದು ಈ ಸಮೀಕ್ಷೆಯಿಂದ ತಿಳಿದು ಬರುತ್ತದೆ.
ಇದು ಸುಸ್ಥಿರ ಅಭಿವೃದ್ಧಿ ಗುರಿಗಳ(ಎಸ್‌ಡಿಜಿ) ಸಾಧನೆ ನಿಟ್ಟಿನಲ್ಲಿ ಸಕಾರಾತ್ಮಕ ಹೆಜ್ಜೆಯಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಶುಕ್ರವಾರ ಬಿಡುಗಡೆ ಮಾಡಲಾಗಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-6 (ಎನ್‌ಎಫ್‌ಎಚ್‌ಎಸ್-6)ರಲ್ಲಿ ಈ ಮಾಹಿತಿ ಇದೆ.
ಸಚಿವಾಲಯ ಕೈಗೊಂಡಿದ್ದ ಈ ಸಮೀಕ್ಷೆಗೆ (ಎನ್‌ಎಫ್‌ಎಚ್‌ಎಸ್-6) ಮುಂಬೈನ ಅಂತರರಾಷ್ಟ್ರೀಯ ಜನಸಂಖ್ಯೆ ವಿಜ್ಞಾನಗಳ ಸಂಸ್ಥೆಯು(ಐಐಪಿಎಸ್) ನೋಡಲ್ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸಿತ್ತು.
2019-2021ರ ಅವಧಿಯಲ್ಲಿ (ಎನ್‌ಎಫ್‌ಎಚ್‌ಎಸ್-5), ಜನಿಸಿದ ಒಂದು ಗಂಟೆ ಒಳಗಾಗಿ ಎದೆ ಹಾಲು ಉಣಿಸಲಾದ ಮಕ್ಕಳ ಸಂಖ್ಯೆ ಶೇ41.8ರಷ್ಟಿತ್ತು. ಈ ಪ್ರಮಾಣ 2023-24ರಲ್ಲಿ ಶೇ50.1ಕ್ಕೆ ಏರಿಕೆಯಾಗಿತ್ತು ಎಂದು ಸಚಿವಾಲಯ ಹೇಳಿದೆ.
ಘನ ಆಹಾರ ಇಲ್ಲವೇ ಅರೆ ಘನ ಆಹಾರ ನೀಡಲಾಗುವ 6ರಿಂದ8 ತಿಂಗಳ ಒಳಗಿನ ಮಕ್ಕಳ ಸಂಖ್ಯೆ ಶೇ45.9ರಿಂದ ಶೇ59.5ಕ್ಕೆ ಏರಿಕೆಯಾಗಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
ಪ್ರಮುಖ ಅಂಶಗಳು
* ಸಮೀಕ್ಷೆ ನಡೆದ ಸಂದರ್ಭದಲ್ಲಿ 6 ತಿಂಗಳ ಒಳಗಿನ ಶೇ95.6ರಷ್ಟು ಮಕ್ಕಳಿಗೆ ತಾಯಂದಿರು ಎದೆಹಾಲು ಉಣಿಸಿದ್ದು ಕಂಡುಬಂದಿದೆ
* ಮೊದಲ ಆರು ತಿಂಗಳು ಸಂಪೂರ್ಣವಾಗಿ ಎದೆ ಹಾಲು ಉಣಿಸಿದ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಎನ್‌ಎಫ್‌ಎಚ್‌ಎಸ್-5ರ ವೇಳೆ ಶೇ63.7ರಷ್ಟಿದ್ದ ಈ ಪ್ರಮಾಣ ಎನ್‌ಎಫ್‌ಎಚ್‌ಎಸ್-6ರ ವೇಳೆಗೆ ಶೇ55.8ಕ್ಕೆ ಕುಸಿದಿದೆ
* 5 ವರ್ಷ ಒಳಗಿನವರ ಪೈಕಿ ವಯಸ್ಸಿಗೆ ತಕ್ಕಂತೆ ಎತ್ತರ ಇಲ್ಲದೇ ಇರುವ(ಕುಂಠಿತ ಬೆಳವಣಿಗೆ) ಮಕ್ಕಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಈ ಮೊದಲು ಶೇ35.5ರಷ್ಟಿದ್ದ ಈ ಪ್ರಮಾಣ ಸಮೀಕ್ಷೆ ವೇಳೆ ಶೇ29.3ರಷ್ಟಿತ್ತು. ಇದು ದೀರ್ಘ ಅವಧಿಗೆ ಪೌಷ್ಟಿಕ ಆಹಾರದ ಒದಗಿಸಿದ್ದರ ಫಲಿತಾಂಶ ಎಂಬುದನ್ನು ತೋರಿಸುತ್ತದೆ
* ತೀವ್ರ ಅಪೌಷ್ಟಿಕತೆ ಪ್ರಮಾಣವು ಶೇ7.7ರಿಂದ ಶೇ5.2ಕ್ಕೆ ಇಳಿಕೆಯಾಗಿದೆ
ಸುಧಾರಣೆಗೆ ಕಾರಣಗಳು
* ಪೋಷಣ್ ಅಭಿಯಾನ ಸಕ್ಷಮ ಅಂಗನಾಡಿ ಹಾಗೂ ಪೋಷಣ್-2.0 ನಂತಹ ಉಪಕ್ರಮಗಳ ಅನುಷ್ಠಾನ
* ಸಮಗ್ರ ಶಿಶು ಅಭಿವೃದ್ಧಿ ಯೋಜನೆ(ಐಸಿಡಿಎಸ್) ಬಲಪಡಿಸಿರುವುದು
* ರಾಷ್ಟ್ರೀಯ ಆರೋಗ್ಯ ಮಿಷನ್ ಪೌಷ್ಟಿಕಾಂಶ ಪುನರ್‌ವಸತಿ ಕೇಂದ್ರಗಳ (ಎನ್‌ಆರ್‌ಸಿ) ಸ್ಥಾಪನೆ ಕಬ್ಬಿಣ ಮತ್ತು ಫೋಲಿಕ್ ಆಯಸಿಡ್ ಮಾತ್ರೆಗಳ ಪೂರೈಕೆಯಂತಹ ಪೂರಕ ಕಾರ್ಯಕ್ರಮಗಳು
* ಮಿಷನ್ ವಾತ್ಸಲ್ಯ ಶಿಶು ಮತ್ತು ಮಕ್ಕಳಿಗೆ ಎದೆಹಾಲು ಉಣಿಸುವುದನ್ನು ಉತ್ತೇಜಿಸುವ ಕಾರ್ಯಕ್ರಮಗಳು

