ಭುಜ್: 'ಪ್ರಾದೇಶಿಕ ಭದ್ರತಾ ಪಡೆ' ಎಂಬ ನೂತನ ಪರಿಕಲ್ಪನೆ ಮೂಲಕ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸುವಲ್ಲಿ ಸರ್ಕಾರ ಕಾರ್ಯನಿರತವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ತಿಳಿಸಿದರು.
ನೂತನ ಪರಿಕಲ್ಪನೆಯು ಬಿಎಸ್‌ಎಫ್ ಸಿಬ್ಬಂದಿ, ಸಾರ್ವಜನಿಕರು, ನಾಗರಿಕ ಆಡಳಿತ, ಸ್ಥಳೀಯ ಪೊಲೀಸರು ಮತ್ತು ಸೇನೆ ಮಧ್ಯೆ ಪ್ರಾಥಮಿಕ ಜವಾಬ್ದಾರಿಗಳನ್ನು ಹಂಚಿಕೆ ಮಾಡುತ್ತದೆ.
ಗುಜರಾತ್‌ನ ಕಛ್ ಜಿಲ್ಲೆಯಲ್ಲಿ ಬಿಎಸ್‌ಎಫ್ ಸಿಬ್ಬಂದಿಗಳ ಜೊತೆ ಅಮಿತ್ ಶಾ ಸಂವಾದ ನಡೆಸಿದರು. 'ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು, ಭೌತಿ/ ಬೇಲಿ ಸಾಧ್ಯವಿಲ್ಲದ ಕಡೆಗಳಲ್ಲಿ ತಂತ್ರಜ್ಞಾನ ಆಧರಿತ ಅಭೇದ್ಯವಾದ ತಡೆಗೋಡೆಯನ್ನು ನಿರ್ಮಿಸುತ್ತಿದೆ' ಎಂದು ತಿಳಿಸಿದರು.
'ಡ್ರೋನ್‌ಗಳು, ರೆಡಾರ್‌ಗಳು, ವಾಚ್‌ಟವರ್ ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅತ್ಯಾಧುನಿಕ ತಡೆಗೋಡೆ ನಿರ್ಮಿಸುತ್ತಿದೆ. ಇದನ್ನು ಮೀರಲು ಸಾಧ್ಯವೇ ಇಲ್ಲ' ಎಂದು ತಿಳಿಸಿದರು.

