ನವದೆಹಲಿ: ವರದಕ್ಷಿಣೆ ಕಿರುಕುಳ ಪ‍್ರಕರಣಗಳು ಸಾಮಾನ್ಯವಾಗುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಮಹಿಳೆ ಹಾಗೂ ಅವರ ಕುಟುಂಬಸ್ಥರನ್ನು ಅವಮಾನಿಸುವ ಉದ್ದೇಶವಿದ್ದರೆ ಮದುವೆ ಏಕೆ ಆಗಬೇಕು ಎಂದು ಪ್ರಶ್ನಿಸಿದೆ.
ಛತ್ತೀಸ್‌ಗಢದ ಗಂಡನ ಮನೆಯಲ್ಲಿ ಪತ್ನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯ ಸಹೋದರ ತನ್ನ ವಿರುದ್ಧ ದಾಖಲಾದ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ ಮೇಲ್ಮನವಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಹಾಗೂ ಉಜ್ಜಲ್ ಭುಯಾನ್ ನೇತೃತ್ವದ ನ್ಯಾಯಪೀಠ ಈ ಅಭಿಪ್ರಾಯಪಟ್ಟಿದೆ.
'ಮಹಿಳೆಯನ್ನು, ಆಕೆಯ ಕುಟುಂಬವನ್ನು ಅವಮಾನಿಸುವ ಉದ್ದೇಶವಿದ್ದರೆ ಮದುವೆ ಏಕೆ ಆಗಬೇಕು? ವಧು ಹಾಗೂ ಆಕೆಯ ಕುಟುಂಬವನ್ನು ಅವಮಾನಿಸುವುದನ್ನು ಸಹಿಸುವುದನ್ನು ಸಾಧ್ಯವಿಲ್ಲ ಎಂಬ ಸಂದೇಶ ಈ ಮೂಲಕ ಹೋಗಲಿ' ನ್ಯಾಯಮೂರ್ತಿ ನಾಗರತ್ನ ತಿಳಿಸಿದ್ದಾರೆ.
ವಧು ಹಾಗೂ ಆಕೆಯ ಕುಟುಂಬಸ್ಥರನ್ನು ಹಣಕ್ಕಾಗಿ ಪೀಡಿಸಿದ್ದು ಕಂಡುಬಂದಿದೆ. ತನ್ನ ಮಗಳನ್ನು ಉಳಿಸಿಕೊಳ್ಳುವಂತೆ ಯುವತಿಯ ಕುಟುಂಬಸ್ಥರು ಮನವಿ ಮಾಡಿದರೆ, ಹಣ ಪಾವತಿಸಲು ಸಾಧ್ಯವಾಗದ ಕುಟುಂಬದ ಸದಸ್ಯರನ್ನು ಭಿಕ್ಷುಕರು ಎಂದು ಬಿಂಬಿಸಲಾಗುತ್ತಿದೆ' ಎಂದು ಅಭಿಪ್ರಾಯಪಟ್ಟರು.
'ವಿದ್ಯಾವಂತ ಕುಟುಂಬಗಳಲ್ಲಿಯೂ ಇಂತಹ ಪ‍್ರವೃತ್ತಿ ಹೆಚ್ಚಾಗುತ್ತಿದೆ' ಎಂದು ನ್ಯಾಯಮೂರ್ತಿ ಭುಯಾನ್ ತಿಳಿಸಿದರು.
ಅರ್ಜಿದಾರರಿಗೆ ಕೆಳ ನ್ಯಾಯಾಲಯ ವಿಧಿಸಿರುವ ಶಿಕ್ಷೆಯ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ನ್ಯಾಯಾಲಯ, ಅರ್ಜಿಯನ್ನು ವಜಾಗೊಳಿಸಿತು.

