ವಿಶ್ವಸಂಸ್ಥೆ: ಯುದ್ಧದ ಸಂದರ್ಭದಲ್ಲಿನ ಲೈಂಗಿಕ ದೌರ್ಜನ್ಯಗಳ ಕುರಿತು ದಾಖಲಿಸುವ ವಿಶ್ವಸಂಸ್ಥೆಯ ವಾರ್ಷಿಕ ವರದಿಯು, ಇಸ್ರೇಲ್ ಮತ್ತು ರಷ್ಯಾ ಸೇನೆಯನ್ನು ಕಪ್ಪುಪಟ್ಟಿಗೆ ಸೇರಿಸಿದೆ.
35 ಪುಟಗಳ ವರದಿಯು ವಿಶ್ವಸಂಸ್ಥೆಗೆ ಗುರುವಾರ ಸಲ್ಲಿಕೆಯಾಗಿದೆ. ವಿಶ್ವದಾದ್ಯಂತ ನಡೆದ ಸಂಘರ್ಷಗಳ ವೇಳೆ ಲೈಂಗಿಕ ದೌರ್ಜನ್ಯ ಎಸಗಿದ ಕಾರಣಕ್ಕೆ 12 ದೇಶಗಳಲ್ಲಿನ 77 ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ.
'2024ಕ್ಕಿಂತ 2025ರಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ' ಎಂದು ವರದಿ ತಿಳಿಸಿದೆ.
ಪ್ಯಾಲೆಸ್ಟೀನ ಬಂಧಿತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪವನ್ನು ಇಸ್ರೇಲ್ ಮೇಲೆ ಹೊರಿಸಲಾಗಿದೆ.
ಉಕ್ರೇನ್ ಜೊತೆಗಿನ ಯುದ್ಧದ ಸಂದರ್ಭದಲ್ಲಿನ ಯುದ್ಧ ಕೈದಿಗಳು ಮತ್ತು ಬಂಧಿತರಾದ ನಾಗರಿಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾರಣಕ್ಕೆ ರಷ್ಯಾದ ಭದ್ರತಾ ಪಡೆಗಳನ್ನು ಮೊದಲ ಬಾರಿಗೆ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಈ ಪಟ್ಟಿಯಲ್ಲಿ ಹಮಾಸ್ ಬಂಡುಕೋರರು ಸೇರಿದ್ದಾರೆ.
ಕಳೆದ ವರ್ಷದ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರು ನೀಡಿದ್ದ ವರದಿಯಲ್ಲಿ ಇಸ್ರೇಲ್ ಮತ್ತು ರಷ್ಯಾವನ್ನು ಕಪ್ಪು ಪಟ್ಟಿಗೆ ಸೇರಿಸಬಹುದು ಎಂದು ಎಚ್ಚರಿಸಿದ್ದರೂ. ಎರಡು ದೇಶಗಳ ರಾಯಭಾರಿಯಗಳು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಗುಟೆರಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
'ಸಂಘರ್ಷಕ್ಕೆ ಸಂಬಂಧಿಸಿ ಹಲವು ಲೈಂಗಿಕ ದೌರ್ಜನ್ಯ ಘಟನೆಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಗಾಜಾ ಮತ್ತು ವೆಸ್ಟ್‌ಬ್ಯಾಂಕ್‌ನಲ್ಲಿ 14 ಪುರುಷರು, ಏಳು ಮಹಿಳೆಯರು, 9 ಹುಡುಗರು ಮತ್ತು ಒಂದು ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಇಂಥ ಘಟನೆಗಳು 2025ರಲ್ಲಿ 13, 2023 ಮತ್ತು 2024ರಲ್ಲಿ 18 ನಡೆದಿವೆ' ಎಂದು ವರದಿ ತಿಳಿಸಿದೆ.
ಮಹಾಪ್ರಧಾನ ಕಾರ್ಯದರ್ಶಿ ಜೊತೆಗೆ ಸಂಪರ್ಕ ಕಡಿತ
ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರ ಜೊತೆ ಎಲ್ಲ ಸಂಪರ್ಕಗಳನ್ನು ಕಡಿತಗೊಳಿಸುವುದಾಗಿ ಇಸ್ರೇಲ್ ರಾಯಭಾರಿ ಘೋಷಿಸಿದ್ದಾರೆ. ಲೈಂಗಿಕ ದೌರ್ಜನ್ಯ ವಿಚಾರವಾಗಿ ಕಪ್ಪುಪಟ್ಟಿಗೆ ಸೇರಿಸಿರುವುದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಅವರು 'ಗುಟೆರಸ್ ಮುಖ್ಯಸ್ಥರಾಗಿರುವವರೆಗೆ ಮಹಾಪ್ರಧಾನ ಕಾರ್ಯದರ್ಶಿ ಕಚೇರಿ ಜೊತೆ ಇಸ್ರೇಲ್‌ಗೆ ಯಾವುದೇ ಸಂಪರ್ಕವಿರುವುದಿಲ್ಲ' ಎಂದು ಹೇಳಿದ್ದಾರೆ. 'ಈ ಆರೋಪಗಳನ್ನು ನಿಸ್ಸಂದಿಗ್ದವಾಗಿ ನಿರಾಕರಿಸುತ್ತೇವೆ. ಈ ನಿರ್ಧಾರವು ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆ ದೀರ್ಘಕಾಲದ ಸಾಂಸ್ಥಿಕ ದ್ವೇಷಕ್ಕೆ ಉದಾಹರಣೆ' ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯ ಹೇಳಿದೆ.

