ವಾಷಿಂಗ್ಟನ್; 'ಹೊರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಿದರೆ ಇರಾನ್ ಬಂದರಿನ ಮೇಲೆ ಅಮೆರಿಕ ಹೇರಿರುವ ನೌಕಾ ದಿಗ್ಭಂಧನವನ್ನು ತಕ್ಷಣವೇ ತೆರವುಗೊಳಿಸಲಾಗುವುದು' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಅವರು, 'ಇರಾನ್ ಜತೆಗೆ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕೇ ಬೇಡವೇ ಎನ್ನುವುದರ ಬಗ್ಗೆ ಅಂತಿಮ ನಿರ್ಣಯವನ್ನು ಇದೀಗ ತೆಗೆದುಕೊಳ್ಳುತ್ತಿದ್ದೇನೆ.
ಆದರೆ, ಇರಾನ್ ಇನ್ನೆಂದೂ ಅಣ್ವಸ್ತ್ರ ಹೊಂದಬಾರದು ಮತ್ತು ಹೊರ್ಮುಜ್ ಜಲಸಂಧಿಯನ್ನು ತೆರೆಯಬೇಕು' ಎಂದು ಹಳೆಯ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.
'ಅಮೆರಿಕದ ಪ್ರಸ್ತಾವಕ್ಕೆ ಇರಾನ್ ಒಪ್ಪಿದೆಯೇ ಅಥವಾ, ಟ್ರಂಪ್ ಹೇಳಿಕೆಗೂ ಮುನ್ನವೇ ಇರಾನ್ ಬಂದರಿನ ಮೇಲೆ ಹೇರಿದ್ದ ದಿಗ್ಭಂಧನವನ್ನು ತೆಗೆದುಹಾಕಲಾಗಿದೆಯೇ ಎನ್ನುವುದು ಖಚಿತಗೊಂಡಿಲ್ಲ. ಇರಾನ್‌ಲ್ಲಿರುವ ಸಮೃದ್ಧೀಕರಿಸಿದ ಯುರೇನಿಯಂ ಹೊರತೆಗೆಯುವ ಬಗ್ಗೆಯೂ ಪ್ರಸ್ತಾಪಿಸಿರುವ ಟ್ರಂಪ್, ಇರಾನ್ ನೆರವಿನೊಂದಿಗೆ, ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ ಸಮ್ಮುಖದಲ್ಲಿ, ಅಮೆರಿಕವೇ ಸಮೃದ್ಧೀಕರಿಸಿದ ಯುರೇನಿಯಂ ಹೊರತೆಗೆದು ನಾಶಪಡಿಸುತ್ತದೆ' ಎಂದಿದ್ದಾರೆ.
'ಯುದ್ಧದ ಹಾನಿ ತುಂಬಿಕೊಳ್ಳಲು ಇರಾನ್ ಆರ್ಥಿಕ ಪರಿಹಾರ ಕೋರಿದೆ ಎನ್ನುವುದರ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್, 'ಮುಂದಿನ ಸೂಚನೆವರೆಗೆ ಯಾವುದೇ ಹಣಕಾಸು ವಿನಿಮಯ ಇರುವುದಿಲ್ಲ' ಎಂದು ಹೇಳಿದ್ದಾರೆ.
ಇರಾನ್‌ನೊಂದಿಗೆ 'ಕಡಿಮೆ ಪ್ರಾಮುಖ್ಯತೆ ಹೊಂದಿರುವ ವಿಷಯಗಳನ್ನು ಮಾತ್ರ ಒಪ್ಪಿಕೊಳ್ಳಲಾಗಿದೆ' ಎಂದೂ ಟ್ರಂಪ್ ಹೇಳಿದ್ದಾರೆ.
'ಒಪ್ಪಂದಕ್ಕೆ ಸಮೀಪದಲ್ಲಿದ್ದೇವೆ'
ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಸದ್ಯ ಜಾರಿಯಲ್ಲಿರುವ ಕದನ ವಿರಾಮವನ್ನು ಇನ್ನಷ್ಟು ದಿನ ವಿಸ್ತರಿಸಲು ಅಮೆರಿಕ ಮತ್ತು ಇರಾನ್ ಒಪ್ಪಂದಕ್ಕೆ ಸಮೀಪದಲ್ಲಿವೆ. ಆದರೆ ಇದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒಪ್ಪಿಗೆಯನ್ನು ಅವಲಂಬಿಸಿದೆ' ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹೇಳಿದ್ದಾರೆ.
ಪಶ್ಚಿಮ ಏಷ್ಯಾ ಸಂಘರ್ಷ ಆರಂಭಗೊಂಡು ಮೂರು ತಿಂಗಳು ಕಳೆದರೂ ಉಭಯ ದೇಶಗಳ ನಡುವೆ ದೃಢವಾದ ಕದನ ವಿರಾಮ ಒಪ್ಪಂದ ಏರ್ಪಟ್ಟಿಲ್ಲ. ಇದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನದ ದರದಲ್ಲಿ ತೀವ್ರ ಏರಿಳಿತ ಕಾಣುತ್ತಿದೆ. 'ಅಂತಿಮಒಪ್ಪಂದ ಯಾವಾಗ ಏರ್ಪಡುತ್ತದೆ ಎನ್ನುವುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಒಪ್ಪಂದಕ್ಕೆ ಸಮೀಪದಲ್ಲಿದ್ದೇವೆ' ಎಂದು ವ್ಯಾನ್ಸ್ ಹೇಳಿದರು.

