ಆಗ್ರಾ: ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ತಮ್ಮ ಪತ್ನಿ ಜೀನೆಟ್ ರೂಬಿಯೊರೊಂದಿಗೆ ಆಗ್ರಾದಲ್ಲಿರುವ ವಿಶ್ವವಿಖ್ಯಾತ ತಾಣ ತಾಜ್‌ಮಹಲ್‌ಗೆ ಭೇಟಿ ನೀಡಿದ್ದಾರೆ.
ನಾಲ್ಕು ದಿನಗಳ ಕಾಲ ಭಾರತದ ಭೇಟಿಯಲ್ಲಿರುವ ಮಾರ್ಕೊ ರುಬಿಯೊ ಅವರು ಸೋಮವಾರ(ಮೇ 25) ಬೆಳಿಗ್ಗೆ ವಿಶೇಷ ವಿಮಾನದಲ್ಲಿ ಆಗ್ರಾದ ಖೇರಿಯಾ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಭಾರೀ ಭದ್ರತಾ ವ್ಯವಸ್ಥೆಗಳೊಂದಿಗೆ ತಾಜ್‌ಮಹಲ್‌ಗೆ ಭೇಟಿ ನೀಡಿದರು.
ಈ ವೇಳೆ ಸ್ಮಾರಕ ಸಂಕೀರ್ಣದೊಳಗಿದ್ದ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ಹೊರಹೋಗುವಂತೆ ಭದ್ರತಾ ಸಿಬ್ಬಂದಿ ಮನವಿ ಮಾಡಿಕೊಂಡರು.
ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿರುವ ತಾಜ್‌ಮಹಲ್‌ನಲ್ಲಿ ಒಂದು ಗಂಟೆ ಇದ್ದ ರುಬಿಯೊ, ಅದನ್ನು 'ವಿಶ್ವದ ಪ್ರೇಮ ನಿಧಿಗಳಲ್ಲಿ ಒಂದು' ಎಂದು ಬಣ್ಣಿಸಿದ್ದಾರೆ.
ವಿಶ್ವದ ಪ್ರೇಮ ನಿಧಿಗಳಲ್ಲಿ ಒಂದನ್ನು ಭೇಟಿ ಮಾಡಲು ನಮಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ಸಂದರ್ಶಕರ ಪುಸ್ತಕದಲ್ಲಿ, ರುಬಿಯೊ ಬರೆದಿದ್ದಾರೆ.
ಮಂಗಳವಾರ ಬೆಳಿಗ್ಗೆ ನವದೆಹಲಿಯಲ್ಲಿ ಕ್ವಾಡ್ ವಿದೇಶಾಂಗ ಸಚಿವರ ಸಭೆ ನಡೆಯಲಿದ್ದು, ಅದಕ್ಕೂ ಮುನ್ನ ರೂಬಿಯೊ ಅವರು ಜೈಪುರಕ್ಕೆ ಪ್ರಯಾಣಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

