ಇಸ್ಲಾಮಾಬಾದ್: 'ಪಶ್ಚಿಮ ಏಷ್ಯಾದಲ್ಲಿ ಯುದ್ಧವನ್ನು ಕೊನೆಗೊಳಿಸಲು ಹಾಗೂ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸಲು ಅಮೆರಿಕ ಮತ್ತು ಇರಾನ್ ಜೊತೆ ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗಿದೆ' ಎಂದು ಪಾಕಿಸ್ತಾನ ಗುರುವಾರ ಹೇಳಿದೆ.
'ರಾಜತಾಂತ್ರಿಕ ಮಾರ್ಗಗಳ ಮೂಲಕ ನಡೆಯುವ ಯಾವುದೇ ವಿಷಯವನ್ನು ಸಂಬಂಧಪಟ್ಟ ದೇಶಗಳಿಗೆ ಪ್ರಾಮಾಣಿಕವಾಗಿ ತಲುಪಿಸಲಾಗುತ್ತಿದೆ' ಎಂದು ವಿದೇಶಾಂಗ ಕಚೇರಿಯ ವಕ್ತಾರ ತಾಹಿರ್ ಅಂದ್ರಾಬಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
'ರಾಜತಾಂತ್ರಿಕ ಮಾತುಕತೆಗಳು ಸ್ಥಗಿತಗೊಂಡಿಲ್ಲ. ಈ ವಿಷಯದಲ್ಲಿ ನಾವು ಸಂಬಂಧಿಸಿದ ವ್ಯಕ್ತಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಹಳೆಯ ಮತ್ತು ಹೊಸ ಪ್ರಸ್ತಾವಗಳು ಚರ್ಚೆಯಲ್ಲಿವೆ. ಉಭಯ ದೇಶಗಳ ನಡುವಿನ ಸಂಘರ್ಷ ಕೊನೆಗೊಂಡು, ಶಾಂತಿ ನೆಲೆಸಲಿ ಎಂದು ನಾವು ಆಶಿಸುತ್ತೇವೆ' ಎಂದು ಹೇಳಿದ್ದಾರೆ.
'ಈ ಸಮಸ್ಯೆಗೆ ಮಾತುಕತೆಯ ಮೂಲಕ ಪರಿಹಾರ ದೊರೆಯುವ ಭರವಸೆ ಪಾಕಿಸ್ತಾನಕ್ಕಿದೆ. ಎರಡೂ ಕಡೆಯವರ ನಡುವೆ ನೇರ ಮಾತುಕತೆಗಳನ್ನು ನಾವು ಪ್ರೋತ್ಸಾಹಿಸುತ್ತೇವೆ. ಇರಾನ್ ಮತ್ತು ಅಮೆರಿಕ ನಡುವೆ ಸ್ಥಿರವಾದ ಸಂಬಂಧ ಏರ್ಪಡಲಿದೆ' ಎಂದು ಆಶಾಭಾವ ವ್ಯಕ್ತಪಡಿಸಿದ್ದಾರೆ.

