ವಾಷಿಂಗ್ಟನ್: ಇರಾನ್ ಯುದ್ಧದ ಬಗ್ಗೆ ಸಾರ್ವಜನಿಕರನ್ನು ದಾರಿ ತಪ್ಪಿಸಿದ ಹಾಗೂ ಹಿರಿಯ ಸೇನಾ ಅಧಿಕಾರಿಗಳನ್ನು ವಜಾಗೊಳಿಸಿದ ಆರೋಪ ಸಂಬಂಧ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹಾಗೂ ಡೆಮಾಕ್ರಟಿಕ್ ಪಕ್ಷದ ನಾಯಕರೊಂದಿಗೆ ವಾಗ್ವಾದ ನಡೆದಿದೆ.
ಬುಧವಾರ ನಡೆದ ಹೌಸ್ ಆರ್ಮ್ಡ್ ಸರ್ವಿಸಸ್ ಸಮಿತಿಯ ಆರು ಗಂಟೆಗಳ ವಿಚಾರಣೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ 1.5 ಟ್ರಿಲಿಯನ್ ಡಾಲರ್ (ಸುಮಾರು ₹142.57 ಲಕ್ಷ ಕೋಟಿ) ರಕ್ಷಣಾ ಬಜೆಟ್ ಕುರಿತು ಚರ್ಚಿಸಲಾಗಿದೆ.
ಫೆಬ್ರುವರಿ 28ರಂದು ಇರಾನ್ ಯುದ್ಧ ಪ್ರಾರಂಭವಾದ ನಂತರ ಹೆಗ್ಸೆತ್ ಮೊದಲ ಬಾರಿ ಸಂಸತ್ ಎದುರಿಸಿದ್ದಾರೆ.
ರಕ್ಷಣಾ ಇಲಾಖೆಯ ಅಧಿಕಾರಿಗಳು ಇರಾನ್ ಯುದ್ಧದ ವೆಚ್ಚವನ್ನು 2,500 ಕೋಟಿ ಡಾಲರ್ (ಸುಮಾರು ₹2.37 ಲಕ್ಷ ಕೋಟಿ) ಎಂದು ಅಂದಾಜಿಸಿದ್ದಾರೆ. ಆದರೆ, ಡೆಮಾಕ್ರಟಿಕ್ ಪಕ್ಷದ ಕೆಲವರು ಇದರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಕ್ಷಣಾ ಕಾರ್ಯದರ್ಶಿ ಹೆಗ್ಸೆತ್ ಅವರ ಸಾಮರ್ಥ್ಯವನ್ನೂ ಪ್ರಶ್ನಿಸಿದ್ದಾರೆ. ಟ್ರಂಪ್ ಅವರು ಈ ಕೆಲಸಕ್ಕೆ ಮಾನಸಿಕವಾಗಿ ಸಮರ್ಥರಾಗಿದ್ದಾರೆಯೇ ಎಂದು ತಿಳಿಯಲು ಬಯಸಿದ್ದಾರೆ.
'ಟ್ರಂಪ್ ಅವರು ಅತ್ಯಂತ ಚುರುಕಾದ ಮತ್ತು ಒಳನೋಟವುಳ್ಳ ಸೇನಾಧಿಪತಿ' ಎಂದು ಹೇಳುವ ಮೂಲಕ ಹೆಗ್ಸೆತ್ ಅವರು ತಿರುಗೇಟು ನೀಡಿದ್ದಾರೆ. ಅಲ್ಲದೆ, 'ಡೆಮಾಕ್ರಟಿಕ್ ಸದಸ್ಯರು ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ದಕ್ಷತೆಯನ್ನು ಎಂದಾದರೂ ಪ್ರಶ್ನಿಸಿದ್ದಾರೆಯೇ' ಎಂದೂ ಕೇಳಿದ್ದಾರೆ.
'ನೀವು ಇದೇ ಪ್ರಶ್ನೆಯನ್ನು ನಾಲ್ಕು ವರ್ಷಗಳ ಕಾಲ ಜೋ ಬೈಡನ್ ಅವರ ಬಳಿ ಕೇಳಿದ್ದೀರಾ? ಸರಿಯಾಗಿ ಮಾತನಾಡಲು ಸಾಧ್ಯವಾಗದ ಮತ್ತು ವಾರದ ದಿನ ಯಾವುದೆಂದು ತಿಳಿಯದ ಬೈಡನ್ ಅವರನ್ನು ನೀವು ಹಾಗೂ ನಿಮ್ಮ ಜೊತೆಗಿನ ಡೆಮಾಕ್ರಟಿಕ್ ಸದಸ್ಯರು ಸಮರ್ಥಿಸಿಕೊಂಡ ನಂತರ ಈಗ ಈ ಪ್ರಶ್ನೆಯನ್ನು ಕೇಳಲು ಬಯಸುತ್ತಿದ್ದೀರಾ?' ಎಂದು ಅವರು ತಿರುಗೇಟು ನೀಡಿದ್ದಾರೆ.

