ಕಾಸರಗೋಡು: ಬೇಕಲ ಪೆರಿಯ ಗೋಕುಲಂ ಗೋಶಾಲೆಯ ಪರಂಪರಾ ವಿದ್ಯಾಪೀಠದ ಆಶ್ರಯದಲ್ಲಿ ಜರಗುತ್ತಿರುವ ಮೂರನೇ ಆವೃತ್ತಿಯ `ವೈಶಾಖ ನಟನಂ' ರಾಷ್ಟ್ರೀಯ ನೃತ್ಯೋತ್ಸವದಲ್ಲಿ, ಖ್ಯಾತ ಚಲನಚಿತ್ರ ಹಾಗೂ ಕಿರುತೆರೆ ಕಲಾವಿದೆ ದೇವಿಚಂದನಾ ಅವರು ಪ್ರಸ್ತುತಪಡಿಸಿದ ಶ್ರೀಕೃಷ್ಣ ಚರಿತಂ ಆಧಾರಿತ ಭರತನಾಟ್ಯ ಕಚೇರಿಯು ಭಕ್ತಿಪರವಶತೆಯನ್ನು ಮೂಡಿಸಿತು.
ಧೇನು ಮಂಟಪದಲ್ಲಿ ನಡೆದ ಈ ಪ್ರದರ್ಶನದಲ್ಲಿ ಕಲಾವಿದೆ ಪೂತನಿ, ಪಾಂಚಾಲಿ ಹಾಗೂ ಯಶೋದೆಯ ಪಾತ್ರಗಳಿಗೆ ಜೀವತುಂಬುವ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಆರೋಗ್ಯದ ಕಾರಣಗಳಿಂದಾಗಿ ಸುದೀರ್ಘ ಕಾಲ ನೃತ್ಯರಂಗದಿಂದ ದೂರವಿದ್ದ ದೇವಿಚಂದನಾ ಅವರಿಗೆ, ಈ ಎರಡು ಗಂಟೆಗಳ ಸುದೀರ್ಘ ನೃತ್ಯ ಪ್ರದರ್ಶನವು ಕಲಾಕ್ಷೇತ್ರಕ್ಕೆ ನೀಡಿದ ಪ್ರಬಲ ಪುನರಾಗಮನದ ಮುದ್ರೆ ಎನಿಸಿತು. ಭಾಗ್ಯಲಕ್ಷ್ಮಿ ಗುರುವಾಯೂರ್ ಅವರ ಗಾಯನವು ನೃತ್ಯದ ಮೆರುಗನ್ನು ಇಮ್ಮಡಿಗೊಳಿಸಿತು. ಇದೇ ವೇದಿಕೆಯಲ್ಲಿ ಪ್ರಸಿದ್ಧ ನೃತ್ಯಗಾರ್ತಿ ಪ್ರಷೀಜಾ ಗೋಪಿನಾಥ್ ಅವರ ಮೋಹಿನಿಯಾಟ್ಟಂ ಪ್ರದರ್ಶನವು ಕಲಾಭಿಮಾನಿಗಳ ವಿಶೇಷ ಗಮನ ಸೆಳೆಯಿತು. ಬಳಿಕ, ಚೆನ್ನೈನ ಸಾತ್ವಿಕಾ ಗೋಪಿನಾಥ್ ಅವರು ತಮ್ಮ ತಂದೆಯವರು ಗೋಶಾಲೆಗಾಗಿ ವಿಶೇಷವಾಗಿ ರಚಿಸಿ ಸಿದ್ಧಪಡಿಸಿದ `ವರ್ಣಂ'ಗೆ ಚರಣಗಳನ್ನಿಡುವ ಮೂಲಕ ಧೇನು ಮಂಟಪಕ್ಕೆ ಸಾಂಸ್ಕøತಿಕ ಕಳೆಯನ್ನು ನೀಡಿದರು.

.jpg)
.jpg)
