HEALTH TIPS

ಸುವೇಂದುಗೆ 'ಅಧಿಕಾರ': ಬಂಗಾಳದ ರಾಜಕೀಯದಲ್ಲಿ ಹೊಸ ಯುಗಕ್ಕೆ ನಾಂದಿ

ಕೋಲ್ಕತ್ತ: ಸುವೇಂದು ಅಧಿಕಾರಿ ಅವರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಅಧಿಕೃತವಾಗಿ ಘೋಷಿಸಿದ್ದಾರೆ. ಇದರೊಂದಿಗೆ ಸುವೇಂದು ಅವರು ಶನಿವಾರ ಪಶ್ಚಿಮ ಬಂಗಾಳದ 9ನೇ ಮತ್ತು ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸುವೇಂದು ಗೆಲುವಿಗೆ ಕಾರಣದ ಅಂಶಗಳು

  • ಮಮತಾ ಬ್ಯಾನರ್ಜಿಗೆ ಸೋಲು: ಕಳೆದ 5 ವರ್ಷಗಳಲ್ಲಿ ಸುವೇಂದು ಅಧಿಕಾರಿ ಅವರು ಮಮತಾ ಬ್ಯಾನರ್ಜಿ ಅವರಿಗೆ ಎರಡು ಬಾರಿ ಸೋಲುಣಿಸಿದ್ದಾರೆ. 2021ರಲ್ಲಿ ನಂದಿಗ್ರಾಮದಲ್ಲಿ ಮತ್ತು 2026ರಲ್ಲಿ ಮಮತಾ ಅವರ ಭದ್ರಕೋಟೆ ಎನಿಸಿದ್ದ ಭವಾನಿಪುರ ಕ್ಷೇತ್ರದಲ್ಲಿ ಸುವೇಂದು ಜಯ ಸಾಧಿಸಿದ್ದಾರೆ.

  • ಪ್ರಬಲ ವಿರೋಧ ಪಕ್ಷದ ನಾಯಕ: ಕಳೆದ ಐದು ವರ್ಷಗಳಿಂದ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಸುವೇಂದು, ಸರ್ಕಾರದ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿದ್ದರು. ಸರ್ಕಾರದ ನೀತಿಗಳ ವಿರುದ್ಧದ ಹೋರಾಟಕ್ಕಾಗಿ ಅವರು ಹಲವು ಬಾರಿ ವಿಧಾನಸಭೆಯಿಂದ ಅಮಾನತುಗೊಂಡಿದ್ದರು.

  • ಪ್ರತಿಭಟನೆಗಳ ನೇತೃತ್ವ: ಶಾಲಾ ಶಿಕ್ಷಕರ ನೇಮಕಾತಿಯಲ್ಲಿ (SSC) ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣ, ಸಂದೇಶ್‌ ಖಾಲಿ ಪ್ರಕರಣ ಮತ್ತು ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗಳನ್ನು ಸಂಘಟಿಸಿದ್ದರು.

ಯಾರು ಈ ಸುವೇಂದು ಅಧಿಕಾರಿ?

  • ಮಣ್ಣಿನ ಮಗ: ಬಂಗಾಳದ ಮಣ್ಣಿನಲ್ಲೇ ಹುಟ್ಟಿ, ಇಲ್ಲಿನ ಸಂಸ್ಕೃತಿಯಲ್ಲಿ ಬೆಳೆದು, ಬಂಗಾಳಿ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವ್ಯಕ್ತಿಯೇ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ‌ ಅಮಿತ್ ಶಾ ಈ ಹಿಂದೆ ಭರವಸೆ ನೀಡಿದ್ದರು. ಅದರಂತೆ ಮಣ್ಣಿನ ಮಗ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದ್ದಾರೆ.

  • ಶಿಕ್ಷಣ: ಪೂರ್ವ ಮೇದಿನಿಪುರದವರಾದ ಸುವೇಂದು, ರವೀಂದ್ರ ಭಾರತಿ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ (ಎಂಎ) ಪದವಿ ಪಡೆದಿದ್ದಾರೆ.

  • ರಾಜಕೀಯ ಜೀವನ: ಬಿಜೆಪಿಗೆ ಸೇರುವ ಮೊದಲು (ಡಿಸೆಂಬರ್ 2020), ಇವರು ಮಮತಾ ಬ್ಯಾನರ್ಜಿ ಅವರ ಸಂಪುಟದಲ್ಲಿ ಸಾರಿಗೆ ಮತ್ತು ಪರಿಸರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

  • ಬಂಗಾಳದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ ಅಂಶಗಳಿವು..

    • 15 ವರ್ಷಗಳಿಂದ ಆಡಳಿತದಲ್ಲಿರುವ ಮಮತಾ ಬ್ಯಾನರ್ಜಿ ಸರ್ಕಾರ ಎದುರಿಸುತ್ತಿದ್ದ ಆಡಳಿತ ವಿರೋಧಿ ಅಲೆ

    • ಹಿಂದುತ್ವ ಪರವಾದ ನೀತಿ. 2021ರ ಚುನಾವಣಾ ಸಂದರ್ಭದಲ್ಲಿ ನಡೆದ ಹಿಂಸಾಚಾರ, ಬಾಂಗ್ಲಾದೇಶದ ಒಳನುಸುಳುಕೋರು ಹಿಂದೂಗಳಿಗಷ್ಟೇ ಅಲ್ಲ, ಇಡೀ ದೇಶದ ಭದ್ರತೆಗೆ ಸವಾಲು ಎಂದು ಬಿಂಬಿಸಿದ್ದು.

    • ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜಿನಲ್ಲಿ ತರಬೇತಿ ನಿರತ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ (ವೈದ್ಯೆಯ ತಾಯಿಗೆ ಟಿಕೆಟ್‌ ನೀಡಲಾಗಿತ್ತು. ಆಕೆ ಗೆದ್ದಿದ್ದಾರೆ), ಸಂದೇಶ್‌ಖಾಲಿ ಪ್ರಕರಣ ಸೇರಿದಂತೆ ಮಹಿಳೆಯರ ಮೇಲೆ ನಡೆಯುತ್ತಿದ್ದ ಅತ್ಯಾಚಾರ, ದೌರ್ಜನ್ಯಗಳನ್ನು ಮುಂದಿಟ್ಟುಕೊಂಡು ಟಿಎಂಸಿ ಆಡಳಿತದಲ್ಲಿ ಬಂಗಾಳ ಮಹಿಳೆಯರಿಗೆ ಸುರಕ್ಷಿತವಲ್ಲ ಎಂದು ಪ್ರತಿಪಾದಿಸಿದ್ದು.

    • ಶಿಕ್ಷಕರ ನೇಮಕಾತಿ ಹಗರಣ ಸೇರಿದಂತೆ ಸರ್ಕಾರದ ವಿರುದ್ಧ ಕೇಳಿ ಬಂದ ಭ್ರಷ್ಟಾಚಾರದ ಆರೋಪಗಳು.

    • ಬಡತನ, ನಿರುದ್ಯೋಗ ಸಮಸ್ಯೆ, ಟಿಎಂಸಿಯ ಉದ್ಯಮ ವಿರೋಧಿ ನೀತಿ.

    • ಮಹಿಳೆಯರಿಗೆ ನಗದು ಸೇರಿದಂತೆ ಉಚಿತ ಕೊಡುಗೆಗಳ ಘೋಷಣೆ.

    • ಬಿಜೆಪಿಯಿಂದ ಮಾತ್ರ ಬಂಗಾಳದ ಅಭಿವೃದ್ಧಿ ಸಾಧ್ಯ ಎಂಬ ಪ್ರತಿಪಾದನೆ.

    • ಡಿಜಿಟಲ್‌ ಮಾಧ್ಯಮದ ಪರಿಣಾಮಕಾರಿ ಬಳಕೆ.

    2020ರಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಸುವೇಂದು, ಕೇವಲ ಆರೇ ವರ್ಷಗಳಲ್ಲಿ ಬಿಜೆಪಿಯನ್ನು ಬಂಗಾಳದಲ್ಲಿ ಅಧಿಕಾರದ ಗದ್ದುಗೆಗೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಳೆ (ಶನಿವಾರ) ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಬಂಗಾಳದ ರಾಜಕೀಯದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries