ಚೆನ್ನೈ: ಎಐಎಡಿಎಂಕೆ ನಾಯಕ, ಮಾಜಿ ಸಚಿವ ವೆಲ್ಲಮಂಡಿ ಆರ್. ನಟರಾಜನ್ ಅವರು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವೆಲ್ಲಮಂಡಿ ಅವರು ಬುಧವಾರ ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್.ಆನಂದ್ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಕಳೆದ ವಾರ ಎಐಎಡಿಎಂಕೆ ಬಂಡಾಯ ಶಾಸಕ ಎಸಕ್ಕಿ ಸುಬಯಾ ಸೇರಿದಂತೆ ನಾಲ್ವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಟಿವಿಕೆಗೆ ಸೇರ್ಪಡೆಗೊಂಡಿದ್ದರು. ಈ ವಾರ ಆಡಳಿತ ಪಕ್ಷಕ್ಕೆ ಸೇರಿದ ಎಐಎಡಿಎಂಕೆಯ ಐದನೇ ಪ್ರಮುಖ ನಾಯಕ ಇವರಾಗಿದ್ದಾರೆ.
ನಟರಾಜನ್ ಅವರು 2016 ರಲ್ಲಿ ತಿರುಚಿರಾಪಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿದ್ದರು. ಪಕ್ಷದಲ್ಲಿನ ನಾಯಕತ್ವದ ಬಿಕ್ಕಟ್ಟಿನ ಸಮಯದಲ್ಲಿ ಅವರು ಮಾಜಿ ಮುಖ್ಯಮಂತ್ರಿ ಓ. ಪನ್ನೀರಸೆಲ್ವಂ ಅವರನ್ನು ಬೆಂಬಲಿಸಿದ್ದರು. ಈ ವರ್ಷದ ಫೆಬ್ರುವರಿಯಲ್ಲಿ ಪನ್ನೀರಸೆಲ್ವಂ ಅವರು ಡಿಎಂಕೆ ಸೇರ್ಪಡೆಗೊಂಡ ಬೆನ್ನಲ್ಲೇ ನಟರಾಜನ್ ಮತ್ತೆ ಎಐಎಡಿಎಂಕೆಗೆ ಮರಳಿದ್ದರು.

