ನವದೆಹಲಿ: ದೇಶದ ಗಡಿಯಿಂದ 15 ಕಿ.ಮೀ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಎಲ್ಲಾ ಅಕ್ರಮ ಕಟ್ಟಡಗಳನ್ನು ಧ್ವಂಸಗೊಳಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುವಂತೆ ಸೂಚಿಸಿದ್ದಾರೆ.
ಈ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕುಗಳಲ್ಲಿ ಕಾನೂನುಬದ್ಧ ಮತ್ತು ಕ್ರಮಬದ್ಧ ಬ್ಯಾಂಕಿಂಗ್ ವಹಿವಾಟು ನಡೆಯುತ್ತಿರುವುದನ್ನು ಖಾತರಿಪಡಿಸಿಕೊಳ್ಳುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸಚಿವಾಲಯವು ಸೂಚಿಸಿದೆ.
ಈ ಪ್ರದೇಶಗಳಲ್ಲಿರುವ ಬೃಹತ್ ವ್ಯಾಪಾರ ಸಂಸ್ಥೆಗಳನ್ನು ಪರಿಶೀಲಿಸಲು ಹಾಗೂ ಅವುಗಳ ಹಣಕಾಸು ಮೂಲಗಳನ್ನು ಪತ್ತೆಹಚ್ಚುವಂತೆ, ನಕಲಿ ಕಂಪನಿಗಳು, ನಕಲಿ ಖಾತೆಗಳು, ನಕಲಿ ಆಧಾರ್ ಕಾರ್ಡ್ ಹೊಂದಿರುವವರ ಬಗ್ಗೆ ನಿಗಾ ವಹಿಸುವಂತೆ ಹಾಗೂ ಗಡಿಯಾಚೆಗಿನ ಕಳ್ಳಸಾಗಣೆ, ಒಳನುಸುಳುವಿಕೆ, ಭಯೋತ್ಪಾದನೆಗೆ ನಿಧಿ ಸಂಗ್ರಹವನ್ನು ಮಟ್ಟ ಹಾಕುವಂತೆಯೂ ಆದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.
ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ, ಬೀಕಾನೇರ್‌ನಲ್ಲಿ ಭದ್ರತಾ ಪರಿಶೀಲನೆ ಸಭೆಯು ಮಂಗಳವಾರ ನಡೆಯಿತು. ಭಾರತ- ಪಾಕಿಸ್ತಾನ ಗಡಿ ಹಾಗೂ ರಾಜಸ್ಥಾನದ ಗಡಿ ಜಿಲ್ಲೆಗಳ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ, ಐದು ಜಿಲ್ಲೆಯ ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಗಡಿ ಪ್ರದೇಶಗಳಲ್ಲಿ ನಡೆಯುವ ಅಪರಾಧಗಳು ಹಾಗೂ ಮಾದಕ ವಸ್ತು ಕಳ್ಳಸಾಗಣೆಯ ಹಿಂದಿನ ಮೂಲ ಮತ್ತು ಅದರ ಜಾಲವನ್ನು ಪತ್ತೆ ಹಚ್ಚಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ನಿರ್ದೇಶಿಸಲಾಗಿದೆ. ಪ್ರತಿ ಗಡಿ ಜಿಲ್ಲೆಗೂ 360 ಡಿಗ್ರಿ ಭದ್ರತಾ ವ್ಯಾಪ್ತಿ ರೂಪಿಸುವಂತೆ ಅಮಿತ್ ಶಾ ಅವರು ಒತ್ತಿ ಹೇಳಿದರು ಎಂದು ಗೃಹ ಸಚಿವಾಲಯವು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

