ನವದೆಹಲಿ: ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು(ಪಿಐಎಲ್) ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತಂತೆ ಸುಪ್ರೀಂ ಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ.
'ಇವು ಈಗ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಾಗಿ ಉಳಿದಿಲ್ಲ. ಅವುಗಳು 'ಖಾಸಗಿ ಹಿತಾಸಕ್ತಿ ಅರ್ಜಿ', 'ಪ್ರಚಾರ ಹಿತಾಸಕ್ತಿ ಅರ್ಜಿ', 'ಪೈಸಾ ಆಸಕ್ತಿಯ ದಾವೆ' ಹಾಗೂ 'ರಾಜಕೀಯ ಹಿತಾಸಕ್ತಿ ವ್ಯಾಜ್ಯ'ಗಳಾಗಿವೆ' ಎಂದು ಹೇಳಿದೆ.
ಶಬರಿಮಲೆ ಸೇರಿ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಒಂಬತ್ತು ಸದಸ್ಯರ ಸಂವಿಧಾನ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ, ಎಂ.ಎಂ.ಸುಂದ್ರೇಶ್, ಅಹ್ಸಾನುದ್ದೀನ್ ಅಮಾನುಲ್ಲಾ, ಅರವಿಂದ ಕುಮಾರ್, ಆಗಸ್ಟೀನ್ ಜಾರ್ಜ್ ಮಸೀಹ್, ಪ್ರಸನ್ನ ಬಿ.ವರಾಳೆ, ಆರ್.ಮಹಾದೇವನ್ ಹಾಗೂ ಜಾಯ್‌ಮಾಲ್ಯಾ ಬಾಗ್ಚಿ ಈ ಪೀಠದಲ್ಲಿದ್ದಾರೆ.
'10 ರಿಂದ 50 ವರ್ಷ ವಯೋಮಾನದ ಮಹಿಳೆಯರು ಕೇರಳದ ಶಬರಿಮಲೆ ದೇವಸ್ಥಾನ ಪ್ರವೇಶಿಸುವುದರ ಮೇಲಿನ ನಿಷೇಧ ಪ್ರಶ್ನಿಸಿ ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಷನ್ 2006ರಲ್ಲಿ ಪಿಐಎಲ್ ಸಲ್ಲಿಸಿದೆ. ಈ ಪಿಐಎಲ್‌ನ ಉದ್ದೇಶವಾದರೂ ಏನು' ಎಂದು ಪೀಠ ಇದೇ ವೇಳೆ ಪ್ರಶ್ನಿಸಿದೆ.
ಆಗ, ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಷನ್ ಪರ ಹಾಜರಿದ್ದ ವಕೀಲ ರವಿಪ್ರಕಾಶ್ ಗುಪ್ತ ಅವರು,'2006ರ ಜೂನ್‌ನಲ್ಲಿ ನಾಲ್ಕು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಲೇಖನಗಳ ಆಧಾರದಲ್ಲಿ ಈ ಪಿಐಎಲ್ ಸಲ್ಲಿಸಲಾಗಿದೆ' ಎಂದು ಪೀಠದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ,'ಈ ಪಿಐಎಲ್‌ಅನ್ನು ಸಾರಾಸಗಟಾಗಿ ತಿರಸ್ಕರಿಸಬೇಕಾಗಿತ್ತು' ಎಂದರು.
'ಒಂದು ಪಿಐಎಲ್ ಸಲ್ಲಿಸುವುದಕ್ಕೆ ಈ ಲೇಖನ ಹೇಗೆ ಆಧಾರವಾಗಬಲ್ಲದು? ಪಿಐಎಲ್ ಸಲ್ಲಿಸುವ ಉದ್ದೇಶಕ್ಕಾಗಿಯೇ ಲೇಖನಗಳನ್ನು ಬರೆಯುವುದು ಬಹಳ ಸುಲಭ' ಎಂದೂ ಹೇಳಿದರು.
'ಜನಸಾಮಾನ್ಯರ ಹಿತದೃಷ್ಟಿಯಿಂದ ಹೈಕೋರ್ಟ್‌ಗಳಲ್ಲಿ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸುವುದನ್ನು ನಾವು ಪುರಸ್ಕರಿಸುತ್ತಾ ಬಂದಿದ್ದೇವೆ. ಆದರೆ, ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ಮುಂದಿಟ್ಟುಕೊಂಡು ಪಿಐಎಲ್ ಸಲ್ಲಿಸುವದನ್ನು ಒಪ್ಪುವುದಿಲ್ಲ' ಎಂದು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹೇಳಿದರು.
'ಮುಖ್ಯ ನ್ಯಾಯಮೂರ್ತಿಗಳು ದಿನವೂ ನೂರಾರು ಪತ್ರಗಳನ್ನು ಸ್ವೀಕರಿಸುತ್ತಾರೆ. ಅವುಗಳನ್ನೆಲ್ಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನಾಗಿ ಪರಿಗಣಿಸಲು ಸಾಧ್ಯವೇ' ಎಂದು ಅವರು ಪ್ರಶ್ನಿಸಿದರು.
ನಂತರ ಪೀಠವು ಅರ್ಜಿಗಳ ವಿಚಾರಣೆಯನ್ನು ಮುಂದೂಡಿತು.

