ಕಾಸರಗೋಡು: ಕಾರಡ್ಕ ಗ್ರಾಮ ಪಂಚಾಯಿತಿಯ ನಾಲ್ಕನೇ ವಾರ್ಡು ಜಯನಗರದಲ್ಲಿ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಚಿರತೆ ಸೆರೆಹಿಡಿಯಲು ಬೋನು ಅಳವಡಿಸಿ ಕಾರ್ಯಾಚರಣೆ ಮುಂದುವರಿಸಿರುವುದಾಗಿ ಅರಣ್ಯ ವಿಭಾಗಾಧಿಕಾರಿ ಕೆ.ಎ. ಬಾಬು ತಿಳಿಸಿದ್ದಾರೆ.
ಜಯನಗರ ಪ್ರದೇಶದಲ್ಲಿ ಚಿರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಅವರು ವಿಭಾಗೀಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ನೀಡಿರುವ ಸೂಚನೆಯನ್ವಯ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಸ್ಥಳೀಯ ನಿವಾಸಿಗಳಿಗೆ ಮಂಗಳವಾರ ರಾತ್ರಿ ಮತ್ತು ಬುಧವಾರ ನಸುಕಿಗೆ ಚಿರತೆ ಕಾಣಸಿಕ್ಕಿದ್ದು, ಈ ಪ್ರದೇಶದಲ್ಲಿ ಐದು ನಾಯಿಗಳನ್ನು ಚಿರತೆ ಕೊಂದಿರುವುದಾಗಿ ಮಾಹಿತಿ ಲಭಿಸಿದೆ.
ಜಿಲ್ಲಾಧಿಕಾರಿಗಳ ಸೂಚನೆಯನ್ವಯ ಕಾರಡ್ಕ ವಿಭಾಗ ಅರಣ್ಯಾಧಿಕಾರಿ ಕೆ.ಎ. ಬಾಬು ನೇತೃತ್ವದಲ್ಲಿ ಅರಣ್ಯ ಅಧಿಕಾರಿ ಜೋಸ್ ಮ್ಯಾಥ್ಯೂ ಅವರ ಮೇಲ್ವಿಚಾರಣೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆಯ ಸದಸ್ಯರ ಸಹಕಾರದೊಂದಿಗೆ ಬೋನು ಅಳವಡಿಸುವ ಕಾರ್ಯ ನಡೆಸಲಾಗಿದೆ.

