HEALTH TIPS

'ಬಿಜೆಪಿ ಯಶಸ್ಸಿನ ಹಿಂದೆ ಕಾಂಗ್ರೆಸ್ ಇದೆ' ಎಂದ ಉದಯನಿಧಿಗೆ ‍ಪ್ರಧಾನ್ ತಿರುಗೇಟು

 ಚೆನ್ನೈ: ಬಿಜೆಪಿಯ ಯಶಸ್ಸಿನ ಹಿಂದೆ ಕಾಂಗ್ರೆಸ್‌ ಇದೆ ಎಂದಿರುವ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್‌ ಅವರಿಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ತಿರುಗೇಟು ನೀಡಿದ್ದಾರೆ.


ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿರುವ ಪ್ರಧಾನ್‌, 'ಪ್ರಜಾಪ್ರಭುತ್ವದಲ್ಲಿ ಜನರೇ ಸರ್ವೋಚ್ಚ ನಾಯಕರು. ಯಾರಿಗೆ ಅಧಿಕಾರ ನೀಡಬೇಕೆಂಬುದನ್ನು ಅವರು ನಿರ್ಧರಿಸುತ್ತಾರೆ. ಡಿಎಂಕೆಯು ದುರಾಡಳಿತ ಮತ್ತು ಜನ ವಿರೋಧಿ ರಾಜಕೀಯದ ಕಾರಣದಿಂದಾಗಿ ತಮಿಳುನಾಡಿನಲ್ಲಿ ವಿಶ್ವಾಸ ಕಳೆದುಕೊಂಡಿದೆ. ಆ ಹತಾಶೆಯಲ್ಲಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ' ಎಂದಿದ್ದಾರೆ.

ಹಾಗೆಯೇ, ದೇಶದ ಜನರು ಕಾಂಗ್ರೆಸ್‌ ಪಕ್ಷವನ್ನು ನಿರಂತರವಾಗಿ ತಿರಸ್ಕರಿಸಿದ್ದಾರೆ ಎಂದೂ ಹೇಳಿದ್ದಾರೆ.

ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆಗಿರುವ ಉದಯನಿಧಿ, ಡಿಎಂಕೆ ಯುವ ಘಟಕದ ಸಭೆಯಲ್ಲಿ ಭಾನುವಾರ ಮಾತನಾಡಿದ್ದರು. ಬಿಜೆಪಿ ನಿರಂತರವಾಗಿ ಯಶಸ್ಸು ಸಾಧಿಸುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರೇ ಕಾರಣ ಎಂದು ನಂಬಿದ್ದೆ. ಆದರೆ, ಆ ಪಕ್ಷದ ಯಶಸ್ಸಿನ ಹಿಂದೆ ಇರುವುದು ಕಾಂಗ್ರೆಸ್‌ ಎಂಬ ತೀರ್ಮಾನಕ್ಕೆ ಈಗ ಬಂದಿದ್ದೇನೆ ಎಂದು ಹೇಳಿದ್ದರು.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಪ್ರಧಾನ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನ್‌, ಪ್ರಧಾನಿ ಮೋದಿ ಅವರು ಜನರ ಆಶೀರ್ವಾದದಿಂದ ಅಧಿಕಾರಕ್ಕೇರಿದ್ದಾರೆಯೇ ಹೊರತು, ವಿರೋಧ ಪಕ್ಷಗಳ ಕೃಪಾಕಟಾಕ್ಷದಿಂದಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಮೈತ್ರಿ ಮುರಿದುಕೊಂಡ ಕಾಂಗ್ರೆಸ್‌

ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ಒಂದಾಗಿದ್ದ ಕಾಂಗ್ರೆಸ್‌ ಮತ್ತು ಡಿಎಂಕೆ, ಫಲಿತಾಂಶದ ಬಳಿಕ ದೂರಾಗಿವೆ.

234 ಸದಸ್ಯ ಬಲದ ವಿಧಾನಸಭೆಗೆ ಏಪ್ರಿಲ್‌ನಲ್ಲಿ ನಡೆದ ಚುನಾವಣೆಯಲ್ಲಿ ನಟ ವಿಜಯ್‌ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) 108 ಸ್ಥಾನಗಳನ್ನು ಗೆದ್ದಿದೆ. ಕಳೆದ ಬಾರಿ ಅಧಿಕಾರದಲ್ಲಿದ್ದ ಡಿಎಂಕೆ ಕೇವಲ 59 ಸ್ಥಾನಗಳಿಗೆ ಮತ್ತು ಪ್ರಮುಖ ವಿರೋಧ ಪಕ್ಷವಾಗಿದ್ದ ಎಐಎಡಿಎಂಕೆ 47 ಕ್ಷೇತ್ರಗಳಿಗೆ ಕುಸಿದಿದೆ.

ವಿಧಾನಸಭೆಯಲ್ಲಿ ಟಿವಿಕೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚಿಸಲು ಬಹುಮತವಿರಲಿಲ್ಲ. ತಮಿಳುನಾಡಿನಲ್ಲಿ ಬಿಜೆಪಿಯು ಸರ್ಕಾರದ ಭಾಗವಾಗುವುದನ್ನು ತಡೆಯುವ ಉದ್ದೇಶದಿಂದ ಕಾಂಗ್ರೆಸ್‌, ವಿಜಯ್ ಪಕ್ಷಕ್ಕೆ ಬೆಂಬಲ ಸೂಚಿಸಿತ್ತು. ಇದು ಡಿಎಂಕೆ ಅಸಮಾಧಾನಕ್ಕೆ ಕಾರಣವಾಗಿದೆ.

'ಡಿಎಂಕೆ ಬೆನ್ನಿಗೆ ಇರಿದಿರುವ ಕಾಂಗ್ರೆಸ್ ಪಕ್ಷವನ್ನು ಇನ್ನೆಂದೂ ನಂಬುವುದಿಲ್ಲ' ಎಂದು ಉದಯನಿಧಿ ಆಕ್ರೋಶ ವ್ಯಕ್ತಪಡಿಸಿದ್ದರು.

ಐವರು ಶಾಸಕರನ್ನು ಹೊಂದಿರುವ ಕಾಂಗ್ರೆಸ್‌, ಟಿವಿಕೆಗೆ ಬೆಂಬಲ ಘೋಷಿಸಿದ ಬಳಿಕ, ತಲಾ ಎರಡು ಕಡೆ ಗೆದ್ದಿರುವ ಸಿಪಿಐ, ಸಿಪಿಐ(ಎಂ), ವಿಸಿಕೆ, ಐಯುಎಂಎಲ್‌ ಪಕ್ಷಗಳೂ ಬೆಂಬಲ ಸೂಚಿಸಿ, ಸರ್ಕಾರ ರಚನೆಗೆ ಕೈ ಜೋಡಿಸಿದ್ದವು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries