ವಾಷಿಂಗ್ಟನ್: 'ಇರಾನ್ ಹೊಸದಾಗಿ ನೀಡಿರುವ ಪ್ರಸ್ತಾವನೆಗಳನ್ನು ಪರಾಮರ್ಶೆ ಮಾಡುತ್ತಿದ್ದೇವೆ. ಆದರೆ ಇರಾನ್ ಅನುಚಿತವಾಗಿ ವರ್ತಿಸಿದರೆ ಮತ್ತೆ ದಾಳಿ ನಡೆಸುತ್ತೇವೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
'ಕಳೆದ 47 ವರ್ಷಗಳಲ್ಲಿ ಮಾನವೀಯತೆ ಹಾಗೂ ಜಗತ್ತಿಗೆ ಮಾಡಿದ ತೊಂದರೆಗೆ ಇರಾನ್ ಇನ್ನೂ ದೊಡ್ಡ ಬೆಲೆಯನ್ನು ತೆತ್ತಿಲ್ಲ' ಎಂದು ಹೇಳಿದ್ದಾರೆ.
'ಹಾಗೊಂದು ವೇಳೆ ಇರಾನ್ ಅನುಚಿತವಾಗಿ, ಏನಾದರೂ ಕೆಟ್ಟದ್ದನ್ನು ಮಾಡಿದರೆ ಅದು ಸಂಭವಿಸುವ ಸಾಧ್ಯತೆಯಿದೆ' ಎಂದು ಟ್ರಂಪ್ ಮುನ್ನೆಚ್ಚರಿಕೆ ನೀಡಿದ್ದಾರೆ.
ಇರಾನ್‌ನ ಹೊಸ ಪ್ರಸ್ತಾವನೆ ಕುರಿತು ಪ್ರತಿಕ್ರಿಯಿಸಿದ ಅವರು, 'ನಾನು ಅದನ್ನು ಪರಾಮರ್ಶೆ ನಡೆಸಲಿದ್ದೇನೆ' ಎಂದಷ್ಟೇ ಹೇಳಿದ್ದಾರೆ.
ಇರಾನ್ ಬಹು-ಹಂತದ ಪ್ರಸ್ತಾವವನ್ನು ಅಮೆರಿಕಕ್ಕೆ ರವಾನಿಸಿದೆ. ಇದರಲ್ಲಿ ಹೊರ್ಮುಜ್ ಜಲಸಂಧಿ ಮುಕ್ತಗೊಳಿಸುವುದು. ಇರಾನ್ ಮೇಲೆ ಅಮೆರಿಕ ವಿಧಿಸಿರುವ ದಿಗ್ಭಂಧನ ತೆರವುಗೊಳಿಸುವುದು ಮತ್ತು ಲೆಬನಾನ್‌ನಲ್ಲಿ ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸುವುದು ಸೇರಿದೆ.
ಇರಾನ್ ಪ್ರಸ್ತಾವನೆಯ ಪ್ರಕಾರ, ಅಂತಹ ಒಪ್ಪಂದದ ಬಳಿಕವಷ್ಟೇ ಅಣ್ವಸ್ತ್ರ ಕಾರ್ಯಕ್ರಮದ ಕುರಿತು ಒಪ್ಪಂದಕ್ಕೆ ಬರಲು ಮತ್ತೊಂದು ತಿಂಗಳ ಮಾತುಕತೆಯನ್ನು ಪ್ರಾರಂಭಿಸಲಾಗುವುದು ಎಂದು ಮೂಲಗಳನ್ನು ಉಲ್ಲೇಖಿಸಿ ಆಕ್ಸಿಯೋಸ್ ವರದಿ ಮಾಡಿದೆ.

