ಜೆರುಸಲೇಂ: ಅಮೆರಿಕದೊಂದಿಗಿನ ಎರಡು ಫೈಟರ್ ಜೆಟ್‌ಗಳ ಯುದ್ಧ ಸ್ಕ್ವಾಡ್ರನ್‌ಗಳನ್ನು ಖರೀದಿಸುವ ಬಹುಕೋಟಿ ಒಪ್ಪಂದಕ್ಕೆ ಅನುಮತಿ ನೀಡಲಾಗಿದೆ ಎಂದು ಭಾನುವಾರ(ಮೇ 3) ಇಸ್ರೇಲ್ ತಿಳಿಸಿದೆ.
ಲಾಕ್ಹೀಡ್ ಮಾರ್ಟಿನ್ ತಯಾರಿಸಿರುವ ಎಫ್-35 ಯುದ್ಧ ವಿಮಾನ ಹಾಗೂ ಬೋಯಿಂಗ್‌ನ ಎಫ್-15ಐಎ ಯುದ್ಧ ವಿಮಾನಗಳು ಈ ಖರೀದಿ ಒಪ್ಪಂದದ ಭಾಗವಾಗಿವೆ ಎಂದು ಇಸ್ರೇಲ್‌ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ತಿಳಿಸಿದ್ದಾರೆ.
ಇಸ್ರೇಲ್ ವಾಯುಪಡೆಯ ಬಲವನ್ನು ಹೆಚ್ಚಿಸುವ ಉದ್ದೇಶದಿಂದ ಈ ಖರೀದಿಗೆ ಮುಂದಾಗಿದ್ದು, ಇದು 'ಶೀಲ್ಡ್ ಆಫ್ ಇಸ್ರೇಲ್' ಯೋಜನೆಯ ಭಾಗವಾಗಿದೆ. ಉತ್ತಮ ಆಯುಧಗಳನ್ನು ಹೊಂದುವ ಮೂಲಕ, ಯಾವುದೇ ಸ್ಥಳದಿಂದ, ಯಾವಾಗ ಬೇಕಾದರೂ ಯುದ್ಧ ಮಾಡುವ ಸಾಮರ್ಥ್ಯವನ್ನು ನಾವು ಸಾಧಿಸಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಗಾಜಾ ಮೇಲಿನ ದಾಳಿಯ ಸಂದರ್ಭದಲ್ಲಿ ಇಸ್ರೇಲ್ ವಾಯುಪಡೆಯು ಪ್ರಮುಖ ಪಾತ್ರವಹಿಸಿತ್ತು. ಹಮಾಸ್‌ನ ನೆಲೆಗಳು, ಸುರಂಗ, ಬಂಕರ್, ಕಮಾಂಡಿಗ್ ಸೆಂಟರ್ ಸೇರಿದಂತೆ ಪ್ರಮುಖ ಸ್ಥಳಗಳ ಮೇಲೆ ವಾಯುಪಡೆಯ ಮೂಲಕ ದಾಳಿ ನಡೆಸಿತ್ತು.
ಎಫ್-35 ಯುದ್ಧ ವಿಮಾನವು ಜಗತ್ತಿನ ಅತ್ಯಾಧುನಿಕ ಯುದ್ಧ ವಿಮಾನಗಳಲ್ಲಿ ಒಂದಾಗಿದೆ. ಹಾಗಾಗಿ, ಇದರ ಖರೀದಿಗೆ ಇಸ್ರೇಲ್ ಮುಂದಾಗಿತ್ತು. ಇತ್ತೀಚೆಗೆ ಮಂಡಿಸಿದ್ದ ಬಜೆಟ್‌ನಲ್ಲಿ ರಕ್ಷಣಾ ವೆಚ್ಚವನ್ನು ಹೆಚ್ಚಿಸಲಾಗಿತ್ತು.
ಇರಾನ್‌ನೊಂದಿಗಿನ ಅಮೆರಿಕ-ಇಸ್ರೇಲ್ ಘರ್ಷಣೆಯ ನಡುವೆಯೇ ಈ ಬೆಳವಣಿಗೆ ನಡೆದಿರುವುದು, ಪಶ್ಚಿಮ ಏಷ್ಯಾ ರಾಷ್ಟ್ರದಲ್ಲಿ ಶಾಶ್ವತ ಕದನವಿರಾಮಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ.

