ನಾರಾಯಣಪುರ: ಪ್ರಧಾನಿ ನರೇಂದ್ರ ಮೋದಿಯವರ ಮಿತವ್ಯಯದ ಕರೆಗೆ ಸ್ಪಂದಿಸಿರುವ ಛತ್ತೀಸಗಢದ ನಾರಾಯಣಪುರ ಜಿಲ್ಲೆಯ ಪೊಲೀಸ್ ಪೇದೆಯೊಬ್ಬರು ತಮ್ಮ ಮದುವೆ ಮೆರವಣಿಗೆಗೆ (ಬರಾತ್) ವಾಹನಗಳನ್ನು ಬಳಸುವ ಬದಲು ಎತ್ತಿನ ಗಾಡಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಈಚೆಗೆ ಹೈದರಾಬಾದ್‌ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದ ಯುದ್ಧದಿಂದಾಗಿ ಭಾರತದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮಗಳನ್ನು ಎದುರಿಸಲು ಇಂಧನ ಬಳಕೆ ಕಡಿಮೆ ಮಾಡುವುದು ಸೇರಿದಂತೆ ಹಲವು ಸಲಹೆಗಳನ್ನು ನೀಡಿದ್ದರು.
ನಾರಾಯಣಪುರ ಪೊಲೀಸ್ ಅಧೀಕ್ಷಕರ ಗನ್‌ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿರುವ ಕುಬೇರ್ ದೆಹಾರಿ ಎಂಬುವರು ಮೇ 12ರಂದು ಮದುವೆಯಾಗಿದ್ದರು. 3 ಕಿ.ಮೀ ದೂರವಿರುವ ವಧುವಿನ ಮನೆಗೆ ಮೆರವಣಿಗೆ ಹೋಗಲು ವಾಹನಗಳನ್ನು ಬಳಸುವ ಬದಲು ಎತ್ತಿನ ಗಾಡಿಗಳನ್ನು ಆಯ್ದುಕೊಂಡಿದ್ದಾರೆ.
ಒಂದು ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಸಾಗಿದ ಈ ವಿಶೇಷ ಮೆರವಣಿಗೆಯ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ದೆಹಾರಿ, 'ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳೇ ನಮ್ಮ ನಿಜವಾದ ಗುರುತು. ಯುವ ಪೀಳಿಗೆ ಇದನ್ನು ಉಳಿಸಬೇಕು. ಪ್ರಧಾನಿ ಮೋದಿ ಅವರ ಮನವಿ ಕೇವಲ ಒಂದು ಹೇಳಿಕೆಯಲ್ಲ, ಅದು ರಾಷ್ಟ್ರ ಹಿತಾಸಕ್ತಿಯ ಸಂದೇಶವಾಗಿದೆ. ದೇಶವನ್ನು ಬಲಪಡಿಸಲು ಮತ್ತು ಸಂಪನ್ಮೂಲಗಳನ್ನು ಸಂರಕ್ಷಿಸಲು ಪ್ರತಿಯೊಬ್ಬರ ಭಾಗವಹಿಸುವಿಕೆ ಅತ್ಯಗತ್ಯ' ಎಂದಿದ್ದಾರೆ.
ದೆಹಾರಿ ನಡೆಯನ್ನು ಶ್ಲಾಘಿಸಿರುವ ಛತ್ತೀಸಗಢದ ಅರಣ್ಯ ಸಚಿವ ಕೇದಾರ್ ಕಶ್ಯಪ್, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
'ಇಂಧನ ಉಳಿಸುವ ಮೋದಿಜಿ ಅವರ ಮನವಿಗೆ ಸ್ಪಂದಿಸಿ, ನಾರಾಯಣಪುರದ ಡುಮರ್ತರಾಯದ ಕುಬೇರ್ ದೆಹಾರಿ ಅವರು ಎತ್ತಿನ ಗಾಡಿಗಳಲ್ಲಿ ಮೆರವಣಿಗೆ ಹೊರಡುವ ಮೂಲಕ ವಧುವಿನ ಮನೆಗೆ ಆಗಮಿಸಿದ್ದಾರೆ. ಸರಳತೆ ಮತ್ತು ಸಂಪ್ರದಾಯದಲ್ಲಿ ಬೇರೂರಿರುವ ಈ ವಿಶಿಷ್ಟ ವಿವಾಹ ಮೆರವಣಿಗೆಯು ಪರಿಸರ ಸಂರಕ್ಷಣೆ ಸುಂದರ ಸಂದೇಶವಾಗಿದೆ' ಎಂದು ಬರೆದುಕೊಂಡಿದ್ದಾರೆ.
ಮದುವೆ ಸಮಾರಂಭಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಇಂದಿನ ಕಾಲದಲ್ಲಿ, ಈ ವಿಶೇಷ ಮೆರವಣಿಗೆಯು ಸಾರ್ವಜನಿಕರಲ್ಲಿ ಚರ್ಚೆಯ ವಿಷಯವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಆಧುನೀಕರಣದ ಜೊತೆಗೆ ಸಂಸ್ಕೃತಿ, ಸಂಪ್ರದಾಯ ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

