ಕೋಲ್ಕತ್ತ: ಅಧಿಕಾರಿಗಳಿಂದ 'ದೃಢೀಕರಣ ಪತ್ರ' ಪಡೆಯದೆ ಪ್ರಾಣಿಗಳನ್ನು ವಧೆ ಮಾಡುವುದನ್ನು ನಿಷೇಧಿಸಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮಾರ್ಗಸೂಚಿ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಪ್ರಾಣಿಗಳ ವಧೆ ಮಾಡುವ ಮೊದಲು ಅವುಗಳ ವಯಸ್ಸು ಮತ್ತು ದೈಹಿಕ ಸ್ಥಿತಿಯನ್ನು ಅಧಿಕಾರಿಗಳು ಪರಿಶೀಲಿಸಲಿದ್ದು, ನಂತರವಷ್ಟೇ ವಧೆಗೆ ಪ್ರಮಾಣಪತ್ರ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ವಧೆ ಮಾಡುವುದನ್ನು ಕಡ್ಡಾಯ ನಿಷೇಧಿಸಲಾಗಿದೆ. ವಧೆ ಮಾಡುವ ಪ್ರಾಣಿ ವಯಸ್ಸು 14 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಮತ್ತು ಗಾಯ, ದೈಹಿಕ ವಿಕಲತೆ, ವಯಸ್ಸು ಅಥವಾ ಗುಣಪಡಿಸಲಾಗದ ಕಾಯಿಲೆಯಿಂದಾಗಿ ಶಾಶ್ವತವಾಗಿ ಅಶಕ್ತವಾಗಿದೆ ಎಂದು ದೃಢಪಟ್ಟಿದ್ದರೆ ಮಾತ್ರ ವಧೆ ಮಾಡಲು ಅವಕಾಶ ನೀಡಲಾಗುತ್ತದೆ ಎಂದೂ ಸರ್ಕಾರ ವಿವರಿಸಿದೆ.
ಈ ಮಾರ್ಗಸೂಚಿಗಳು ಪಶ್ಚಿಮ ಬಂಗಾಳ ಪ್ರಾಣಿ ವಧೆ ನಿಯಂತ್ರಣ ಕಾಯ್ದೆ-1950ರ ಅನುಗುಣವಾಗಿವೆ. 2018 ಮತ್ತು 2022ರಲ್ಲಿ ಕಲ್ಕತ್ತ ಹೈಕೋರ್ಟ್ ನೀಡಿದ ಸರಣಿ ಆದೇಶದ ಹಿನ್ನೆಲೆಯಲ್ಲಿ ಇವುಗಳನ್ನು ಜಾರಿಗೆ ತರಲಾಗಿದೆ.
'ಗೂಳಿ, ಎತ್ತು, ಹಸು, ಕರು, ಎಮ್ಮೆ ಮತ್ತು ಕೋಣಗಳನ್ನು ವಧೆ ಮಾಡುವ ಮೊದಲು ಅವು ವಧೆಗೆ ಯೋಗ್ಯವಾಗಿವೆ ಎಂಬ ಪ್ರಮಾಣಪತ್ರವನ್ನು ಪಡೆಯುವುದು ಕಡ್ಡಾಯ. ಇಲ್ಲದಿದ್ದರೆ ಯಾರೂ ಪ್ರಾಣಿ ವಧೆ ಮಾಡುವಂತಿಲ್ಲ' ಎಂದು ಪ್ರಕಟಣೆ ತಿಳಿಸಿದೆ.
ಮಾರ್ಗಸೂಚಿಗಳ ಅನ್ವಯ, ಸಂಬಂಧಪಟ್ಟ ನಗರಸಭೆ ಅಧ್ಯಕ್ಷ ಅಥವಾ ಪಂಚಾಯತಿಯ ಅಧ್ಯಕ್ಷರು ಸರ್ಕಾರಿ ಪಶುವೈದ್ಯರೊಂದಿಗೆ ಚರ್ಚಿಸಿ ಜಂಟಿಯಾಗಿ ಈ ಪ್ರಮಾಣಪತ್ರವನ್ನು ನೀಡಬೇಕು. ಒಂದು ವೇಳೆ ಪ್ರಮಾಣಪತ್ರ ನೀಡಲು ನಿರಾಕರಿಸಿದರೆ, ಆಕ್ಷೇಪವಿರುವ ವ್ಯಕ್ತಿಯು 15 ದಿನಗಳ ಒಳಗಾಗಿ ರಾಜ್ಯ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಬಹುದು.
ದಂಡ ಮತ್ತು ಶಿಕ್ಷೆ
ಪ್ರಮಾಣಪತ್ರ ಪಡೆದ ಪ್ರಾಣಿಗಳನ್ನು ಕೇವಲ ನಗರಸಭೆಯ ಕಸಾಯಿಖಾನೆಯಲ್ಲಿ ಅಥವಾ ಸ್ಥಳೀಯ ಆಡಳಿತ ಗುರುತಿಸಿದ ಇತರ ಕಸಾಯಿಖಾನೆಗಳಲ್ಲಿ ಮಾತ್ರ ವಧೆ ಮಾಡಬೇಕು ಎಂದು ಅಧಿಸೂಚನೆ ತಿಳಿಸಿದೆ.
ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸುವವರಿಗೆ 6 ತಿಂಗಳವರೆಗೆ ಜೈಲು ಶಿಕ್ಷೆ ಮತ್ತು ₹1,000 ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ಕೋಲ್ಕತ್ತದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

