HEALTH TIPS

ಸಾರ್ವಜನಿಕ ಭೂಮಿಯಲ್ಲಿ ನಮಾಝ್ ಸಲ್ಲಿಸುವುದು ಮೂಲಭೂತ ಹಕ್ಕಲ್ಲ: ಅಲಹಾಬಾದ್ ಹೈಕೋರ್ಟ್

ಅಲಹಾಬಾದ್: ಸಂವಿಧಾನಾತ್ಮಕ ಧಾರ್ಮಿಕ ಸ್ವಾತಂತ್ರ್ಯವು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಹಾಗೂ ಇತರರ ಹಕ್ಕುಗಳಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿರುವ ಅಲಹಾಬಾದ್ ಹೈಕೋರ್ಟ್, ಸಾರ್ವಜನಿಕ ಭೂಮಿಗಳಲ್ಲಿ ನಮಾಝ್ ಸಲ್ಲಿಸುವುದಾಗಲಿ ಅಥವಾ ದೊಡ್ಡ ಮಟ್ಟದ ಧಾರ್ಮಿಕ ಸಭೆಗಳನ್ನು ನಡೆಸುವುದಾಗಲಿ ಮೂಲಭೂತ ಹಕ್ಕಿನ ವ್ಯಾಪ್ತಿಗೆ ಬರುವುದಿಲ್ಲ ಎಂದು ತೀರ್ಪು ನೀಡಿದೆ.

ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಐಕೋನಾ ಗ್ರಾಮದ ಸಾರ್ವಜನಿಕ ಭೂಮಿಯಲ್ಲಿ ನಮಾಝ್ ಸಲ್ಲಿಸಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಪೀಠ, ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದೆ. ನ್ಯಾಯಮೂರ್ತಿಗಳಾದ ಗರೀಮಾ ಪ್ರಸಾದ್ ಹಾಗೂ ಸರಳ್ ಶ್ರೀವಾಸ್ತವ ಅವರನ್ನೊಳಗೊಂಡ ಪೀಠವು, ಖಾಸಗಿ ಜಮೀನಿನಲ್ಲಿ ನಮಾಝ್ ಸಲ್ಲಿಸಲು ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಅಸೀನ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

2023ರ ಜೂನ್ 16ರ ದಿನಾಂಕದ ನೋಂದಾಯಿತ ದಾನಪತ್ರದ ಆಧಾರದಲ್ಲಿ ತಾನು ಜಮೀನಿನ ಮಾಲಕನೆಂದು ಅರ್ಜಿದಾರ ಅಸೀನ್ ವಾದಿಸಿದ್ದರು. ಖಾಸಗಿ ಜಮೀನಿನಲ್ಲಿ ನಮಾಝ್ ಸಲ್ಲಿಸಲು ಪೂರ್ವಾನುಮತಿ ಅಗತ್ಯವಿಲ್ಲದಿದ್ದರೂ, ಕಾನೂನುಬಾಹಿರವಾಗಿ ತಡೆಯಲಾಗುತ್ತಿದೆ. ಇದರಿಂದ ತನ್ನ ಸಂವಿಧಾನಾತ್ಮಕ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದರು.

ಈ ಅರ್ಜಿಯನ್ನು ವಿರೋಧಿಸಿದ ಉತ್ತರ ಪ್ರದೇಶ ಸರ್ಕಾರ, ವಿವಾದಿತ ಜಮೀನು ಸರಕಾರಿ ಕಂದಾಯ ದಾಖಲೆಗಳಲ್ಲಿ ವಾಸಯೋಗ್ಯ ಭೂಮಿಯಾಗಿ ದಾಖಲಾಗಿದ್ದು, ಸಾರ್ವಜನಿಕ ಬಳಕೆಗೆ ಮೀಸಲಾಗಿದೆ ಎಂದು ವಾದಿಸಿದೆ. ಅರ್ಜಿದಾರರು ತಮ್ಮ ಮಾಲಕತ್ವವನ್ನು ಸಾಬೀತುಪಡಿಸಲು ವಿಫಲರಾಗಿದ್ದು, ಅವರು ಸಲ್ಲಿಸಿದ ದಾನಪತ್ರದಲ್ಲಿ ಭೂಮಿಯ ಸ್ಪಷ್ಟ ಗುರುತು ಹಾಗೂ ಗಡಿಗಳ ವಿವರಗಳ ಕೊರತೆ ಇದೆ ಎಂದು ತಿಳಿಸಿದೆ.

ಈ ಸ್ಥಳದಲ್ಲಿ ಹಿಂದಿನಿಂದ ಕೇವಲ ಈದ್ ಸಂದರ್ಭದಲ್ಲಿ ಮಾತ್ರ ನಮಾಝ್ ಸಲ್ಲಿಸಲಾಗುತ್ತಿತ್ತು ಹಾಗೂ ಇದುವರೆಗೆ ಅಂತಹ ಆಚರಣೆಗೆ ಯಾವುದೇ ನಿರ್ಬಂಧ ಇರಲಿಲ್ಲ ಎಂದು ಸರ್ಕಾರ ತಿಳಿಸಿದೆ. ಆದರೆ ಇತ್ತೀಚೆಗೆ ಅರ್ಜಿದಾರರು ಗ್ರಾಮದ ಒಳಗೂ ಹೊರಗೂ ಜನರನ್ನು ಆಹ್ವಾನಿಸಿ ದೊಡ್ಡ ಮಟ್ಟದ ಪ್ರಾರ್ಥನಾ ಸಭೆಗಳನ್ನು ಆಯೋಜಿಸುತ್ತಿದ್ದು, ಇದರಿಂದ ಸ್ಥಳೀಯ ಸಾಮಾಜಿಕ ಸಮತೋಲನ ವ್ಯತ್ಯಯಗೊಳ್ಳುವ ಸಾಧ್ಯತೆ ಇದೆ ಎಂದು ಸರ್ಕಾರ ವಾದಿಸಿದೆ.

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂವಿಧಾನ ನೀಡಿರುವ ಭದ್ರತೆಯನ್ನು ಪುನರುಚ್ಚರಿಸಿದರೂ, ಅದು ನಿರ್ಬಂಧರಹಿತ ಹಕ್ಕಲ್ಲ ಎಂದು ಅಭಿಪ್ರಾಯಪಟ್ಟಿದೆ. ಸಾರ್ವಜನಿಕ ಭೂಮಿ ಎಲ್ಲರೂ ಬಳಸುವ ಸ್ಥಳವಾಗಿರುವುದರಿಂದ, ಸಂಚಾರಕ್ಕೆ ಅಡಚಣೆ ಉಂಟುಮಾಡುವ ಅಥವಾ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರಬಹುದಾದ ಧಾರ್ಮಿಕ ಚಟುವಟಿಕೆಗಳನ್ನು ಪದೇಪದೇ ನಡೆಸಲು ಅದನ್ನು ಬಳಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಖಾಸಗಿ ಪ್ರಾರ್ಥನೆ ಮತ್ತು ಸಂಘಟಿತ ಧಾರ್ಮಿಕ ಸಭೆಗಳ ನಡುವಿನ ವ್ಯತ್ಯಾಸವನ್ನೂ ಪೀಠ ಉಲ್ಲೇಖಿಸಿದೆ. ಮನೆಮಠದೊಳಗಿನ ಅಥವಾ ಸೀಮಿತ ವಲಯದ ಪ್ರಾರ್ಥನೆಗಳಿಗೆ ರಕ್ಷಣೆ ಇದ್ದರೂ, ದೊಡ್ಡ ಪ್ರಮಾಣದಲ್ಲಿ ಜನರನ್ನು ಒಳಗೊಂಡ ಚಟುವಟಿಕೆಗಳು ಸಾರ್ವಜನಿಕ ಸ್ವರೂಪ ಪಡೆಯುತ್ತವೆ. ಇಂತಹ ಸಂದರ್ಭಗಳಲ್ಲಿ ರಾಜ್ಯ ಸರ್ಕಾರವು ನಿಯಂತ್ರಣ ಹಕ್ಕು ಹೊಂದಿದೆ ಎಂದು ತಿಳಿಸಿದೆ.

ಯಾವುದೇ ಚಟುವಟಿಕೆ ಸಾರ್ವಜನಿಕ ಸುವ್ಯವಸ್ಥೆ ಅಥವಾ ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ಸಾಧ್ಯತೆ ಇದ್ದರೆ, ಕಾನೂನು ಜಾರಿ ಪ್ರಾಧಿಕಾರಗಳು ನೈಜ ಶಾಂತಿ ಭಂಗವಾಗುವವರೆಗೆ ಕಾಯಬೇಕಾದ ಅಗತ್ಯವಿಲ್ಲ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಅವುಗಳಿಗೆ ಅಧಿಕಾರವಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಅರ್ಜಿದಾರರು ತಮ್ಮ ಮಾಲಕತ್ವವನ್ನು ಸಮರ್ಪಕವಾಗಿ ಸಾಬೀತುಪಡಿಸಲು ವಿಫಲರಾಗಿರುವುದರಿಂದ, ವಿವಾದಿತ ಭೂಮಿಯು ಸಾರ್ವಜನಿಕ ಭೂಮಿಯೇ ಆಗಿ ಮುಂದುವರಿಯಲಿದೆ ಎಂದು ಹೇಳಿದ ನ್ಯಾಯಾಲಯ, ಅರ್ಜಿಯನ್ನು ವಜಾಗೊಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries