ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬಂಧಪಟ್ಟಂತೆ ಇರಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡುವಿನ ಭಿನ್ನಾಭಿಪ್ರಾಯಗಳು ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯ ಮೊದಲ ದಿನದಂದೇ ಬಹಿರಂಗಗೊಂಡಿದೆ.
ಗುರುವಾರ(ಮೇ 14) ಇಲ್ಲಿ ಪ್ರಾರಂಭವಾಗಿರುವ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಗೆ ಭಾರತ ಅಧ್ಯಕ್ಷತೆ ವಹಿಸಿದೆ.
ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಬ್ರಿಕ್ಸ್ ವಾರ್ಷಿಕ ಶೃಂಗಸಭೆ ನಡೆಯಲಿದೆ.
ಸಭೆಯ ಮೊದಲ ದಿನ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಮತ್ತು ಯುಎಇ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಖಲೀಫಾ ಶಾಹೀನ್ ಅಲ್ ಮರಾರ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಗಮನಿಸಿದ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಸಭೆಯಲ್ಲಿ ಮೊದಲು ಮಾತನಾಡಿದ ಅರಾಘ್ಚಿ, ಅಮೆರಿಕ ಮತ್ತು ಇಸ್ರೇಲ್ ಮಾಡುತ್ತಿರುವ ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಗಳನ್ನು ಬ್ರಿಕ್ಸ್ ರಾಷ್ಟ್ರಗಳು ಸ್ಪಷ್ಟವಾಗಿ ಖಂಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಅದಾಗ್ಯೂ, ತಮ್ಮ ಭಾಷಣದಲ್ಲಿ ಯುಎಇ ಬಗ್ಗೆ ಅವರು ಯಾವುದೇ ಪ್ರಸ್ತಾಪ ಮಾಡಿರಲಿಲ್ಲ.
ಆದರೆ ನಂತರ ಮಾತನಾಡಿದ ಅಲ್ ಮರಾರ್, ತನ್ನ ನೆರೆಯ ರಾಷ್ಟ್ರಗಳ ಮೇಲೆ ಇರಾನ್ ದಾಳಿ ನಡೆಸುತ್ತಿದೆ ಎಂದು ಟೀಕಿಸಿದ್ದಾರೆ.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಅರಾಘ್ಚಿ, ಇರಾನ್ ಮೇಲೆ ದಾಳಿ ನಡೆಸಲು ಅಮೆರಿಕಕ್ಕೆ ತನ್ನ ಭೂಪ್ರದೇಶವನ್ನು ಬಳಸಲು ಯುಎಇ ಅವಕಾಶ ನೀಡುತ್ತಿದೆ ಎಂದು ಹೇಳಿದ್ದಾರೆ.
ಈ ಹೇಳಿಕೆಗಳು ಯುಎಇ ಮತ್ತು ಇರಾನ್ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಕುರಿತು ಸದಸ್ಯ ರಾಷ್ಟ್ರಗಳ ನಡುವೆಯೇ ಭಿನ್ನಾಭಿಪ್ರಾಯ ಮೂಡಿದ್ದರಿಂದ, ಈ ಕುರಿತು ಒಮ್ಮತದ ಪ್ರಕಟಣೆ ಬಿಡುಗಡೆ ಮಾಡಲು ಬ್ರಿಕ್ಸ್‌ಗೆ ಸಾಧ್ಯವಾಗಿಲ್ಲ.
ಫೆ.28ರಿಂದ ಪ್ರಾರಂಭವಾದ ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧವು ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಸದ್ಯ ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಜಾರಿಯಲ್ಲಿದೆ.
ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ದೇಶಗಳನ್ನು ಒಳಗೊಂಡಿದ್ದ ಬ್ರಿಕ್ಸ್ 2024ರಲ್ಲಿ ವಿಸ್ತರಿಸಲಾಯಿತು. ಈಜಿಪ್ಟ್, ಇಥಿಯೋಪಿಯಾ, ಇರಾನ್ ಮತ್ತು ಯುಎಇ ಸೇರ್ಪಡೆಗೊಂಡಿತ್ತು. 2025ರಲ್ಲಿ ಇಂಡೋನೇಷ್ಯಾ ಸಹ ಸದಸ್ಯ ರಾಷ್ಟ್ರವಾಯಿತು.

