ವಾಷಿಂಗ್ಟನ್(ರಾಯಿಟರ್ಸ್): ಭಾರತದ ಕೋಟ್ಯಧೀಶ ಉದ್ಯಮಿ ಗೌತಮ ಅದಾನಿ ಅವರ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಕೈಬಿಡಲು ಅಮೆರಿಕದ ನ್ಯಾಯಾಂಗ ಇಲಾಖೆ ಮುಂದಾಗಿದೆ.
'ಅದಾನಿ ವಿರುದ್ಧದ ಆರೋಪಗಳನ್ನು ಕೈಬಿಡುವ ಕುರಿತಂತೆ ನ್ಯಾಯಾಂಗ ಇಲಾಖೆಯು ಈ ವಾರ ಘೋಷಣೆ ಮಾಡಬಹುದು' ಎಂದು ಮೂಲಗಳನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಅದಾನಿ ಅವರು ರಾಬರ್ಟ್ ಜೆ.ಗಿಯುಫ್ರಾ ಜೂನಿಯರ್ ನೇತೃತ್ವದ ವಕೀಲರ ತಂಡವನ್ನು ಹೊಸದಾಗಿ ನೇಮಕ ಮಾಡಿಕೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ರಾಬರ್ಟ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪರ ವಕೀಲರಲ್ಲಿ ಒಬ್ಬರಾಗಿದ್ದಾರೆ.
ಭಾರತದ ಸರ್ಕಾರಿ ಸ್ವಾಮ್ಯದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸೌರ ವಿದ್ಯುತ್ ಪೂರೈಸುವ ಯೋಜನೆ ಯನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ಅಮೆರಿಕದ ಬ್ಯಾಂಕ್ ಹಾಗೂ ಅಂತರ ರಾಷ್ಟ್ರೀಯ ಸಂಸ್ಥೆಗಳಿಂದ ಅದಾನಿ ಸಮೂಹದ ಅದಾನಿ ಗ್ರೀನ್ ಎನರ್ಜಿ ಲಿ. 2021-2024ರ ಮಧ್ಯೆ 300 ಕೋಟಿ ಡಾಲರ್‌ಗೂ (₹25 ಸಾವಿರ ಕೋಟಿಗೂ) ಹೆಚ್ಚು ಬಂಡವಾಳ ಸಂಗ್ರಹಿಸಿದ್ದು, ಇದರಲ್ಲಿ 25 ಕೋಟಿ ಡಾಲರ್ (₹2,100 ಕೋಟಿ) ಮೊತ್ತವನ್ನು ಭಾರತದ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಅಥವಾ ನೀಡುವ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
ನ್ಯೂಯಾರ್ಕ್‌ನ ಪೂರ್ವ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ ಗೌತಮ್ ಅದಾನಿ ಹಾಗೂ ಇತರರ ಹೆಸರು ಉಲ್ಲೇಖಿಸಲಾಗಿದೆ.

