ಬೀಜಿಂಗ್ (PTI): 'ಸಂಕಷ್ಟದ ಸಮಯದಲ್ಲಿ ನಾವು ಜತೆಯಾಗಿ ನಿಲ್ಲುತ್ತೇವೆ. ದ್ವಿಪಕ್ಷೀಯ ಸಹಕಾರದ ಮೂಲಕ ಅದ್ಭುತ ಭವಿಷ್ಯವನ್ನು ರೂಪಿಸಿಕೊಳ್ಳುತ್ತೇವೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಗುರುವಾರ ಬೀಜಿಂಗ್‌ನಲ್ಲಿ ಆರಂಭವಾದ ಸಭೆಯಲ್ಲಿ ಮಾತನಾಡಿದ ಟ್ರಂಪ್, ಉಭಯ ದೇಶಗಳ ನಡುವಿನ ವ್ಯಾಪಾರ ಸಂಘರ್ಷಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದರು.
ಜಿನ್‌ಪಿಂಗ್ ಅವರನ್ನು ಮಹಾನ್ ನಾಯಕ ಎಂದು ಬಣ್ಣಿಸಿದ ಟ್ರಂಪ್, ಅವರೊಂದಿಗಿನ ಮಾತುಕತೆಯನ್ನು 'ಅತಿ ದೊಡ್ಡ ಶೃಂಗಸಭೆ' ಎಂದು ಕರೆದರು.
ಟ್ರಂಪ್ ಮಾತಿಗೆ ಧನ್ಯವಾದ ಸಲ್ಲಿಸಿದ ಜಿನ್‌ಪಿಂಗ್, 'ಚೀನಾ ಮತ್ತು ಅಮೆರಿಕದ ಪಾಲಿಗೆ 2026 ಐತಿಹಾಸಿಕ ಮೈಲಿಗಲ್ಲಿನ ವರ್ಷವಾಗಲಿದೆ' ಎಂದರು. ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯಗಳಿಗಿಂತಲೂ ಸಾಮಾನ್ಯ ಹಿತಾಸಕ್ತಿಗಳೇ ಹೆಚ್ಚಿವೆ' ಎನ್ನುವ ಮೂಲಕ ವ್ಯಾಪಾರ ಪಾಲುದಾರಿಕೆಯನ್ನು ಬಲಪಡಿಸುವ ಇಂಗಿತ ವ್ಯಕ್ತಪಡಿಸಿದರು. ಚೀನಾ-ಅಮೆರಿಕ ನಡುವಿನ ವ್ಯಾಪಾರ ಸಂಘರ್ಷದ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ ಜಿನ್‌ಪಿಂಗ್, 'ವ್ಯಾಪಾರ ಯುದ್ಧದಲ್ಲಿ ಯಾರೂ ಗೆದ್ದವರಿಲ್ಲ' ಎಂದರು.
ಉಭಯ ನಾಯಕರ ನಡುವಿನ ಮೊದಲ ಮಾತುಕತೆಯು ಎರಡು ಗಂಟೆ ಮುಂದುವರಿಯಿತು ಎಂದು ಮೂಲಗಳು ಹೇಳಿವೆ.
ಟ್ರಂಪ್ ಜತೆಗೆ ಉದ್ಯಮ ಪ್ರಮುಖರು: ಟ್ರಂಪ್ ಅವರ ಚೀನಾ ಪ್ರವಾಸದಲ್ಲಿ ಅಮೆರಿಕದ ಉದ್ಯಮ ಪ್ರಮುಖರೂ ಜತೆಗಿದ್ದಾರೆ. ಆಯಪಲ್ ಕಂಪನಿಯ ಟಿಮ್ ಕುಕ್, ಎನ್ವಿಡಿಯಾದ ಜೆನ್ಸನ್ ಹುವಾಂಗ್, ಟೆಸ್ಲಾ ಕಂಪನಿಯ ಇಲಾನ್ ಮಸ್ಕ್, ಬ್ಲ್ಯಾಕ್‌ರಾಕ್‌ನ ಲ್ಯಾರಿ ಫಿಂಕ್ ಜತೆಗೆ ಇದ್ದಾರೆ. ಟ್ರಂಪ್ ಜತೆಗೆ ಅವರ ಪುತ್ರ ಎರಿಕ್, ಸೊಸೆ ಲಾರಾ ಹಾಗೂ ಇಲಾನ್ ಮಸ್ಕ್ ಒಟ್ಟಿಗೆ ಚೀನಾಕ್ಕೆ ಬಂದಿಳಿದರು. ಸಾಮಾನ್ಯ ರಾಜತಾಂತ್ರಿಕ ಶಿಷ್ಟಾಚಾರಕ್ಕಿಂತ ಭಿನ್ನವಾಗಿ, ಟ್ರಂಪ್‌ಗೆ ಅಭೂತಪೂರ್ವ ಸ್ವಾಗತವನ್ನು ಚೀನಾ ಕೋರಿದೆ.
ವಿರಳ ಲೋಹ ಸೇರಿ ಹಲವು ವಿಷಯಗಳ ಚರ್ಚೆ: ಪಶ್ಚಿಮ ಏಷ್ಯಾ ಸಂಘರ್ಷದ ಬೆನ್ನಲ್ಲೇ ಕಾಣಿಸಿಕೊಂಡಿರುವ ಆರ್ಥಿಕ, ಭೌಗೋಳಿಕ ಅಸ್ಥಿರತೆ, ತೈಲ ಬೆಲೆ ಏರಿಕೆ ಇತ್ಯಾದಿ ಸಮಸ್ಯೆಗಳಿಗೆ ವಿಶ್ವದ ಎರಡು ಪ್ರಮುಖ ಆರ್ಥಿಕ ಶಕ್ತಿಗಳ ನಡುವಿನ ಚರ್ಚೆಯು ಪರಿಹಾರದ ವೇದಿಕೆಯಾಗಬಹುದು ಎಂದು ಮೂಲಗಳು ಹೇಳಿವೆ
ವ್ಯಾಪಾರ ಮತ್ತು ಸುಂಕ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ, ತೈವಾನ್‌ಗೆ ಅಮೆರಿಕದ ಶಸ್ತ್ರಾಸ್ತ್ರ ಮಾರಾಟ, ಚೀನಾದಿಂದ ಅಮೆರಿಕಕ್ಕೆ ವಿರಳ ಲೋಹಗಳ ಆಮದು ಸೇರಿದಂತೆ ಹಲವು ವಿಷಯಗಳು ಟ್ರಂಪ್-ಜಿನ್‌ಪಿಂಗ್ ನಡುವೆ ಚರ್ಚೆಯಾಗುವ ಸಾಧ್ಯತೆಗಳಿವೆ.
ವಿರಳ ಲೋಹಗಳ ರಫ್ತಿನ ಮೇಲೆ ಚೀನಾ ನಿರ್ಬಂಧ ಹೇರಿದ ಬೆನ್ನಲ್ಲೇ, ಅಮೆರಿಕವು ಚೀನಾ ಮೇಲೆ ಹೆಚ್ಚುವರಿ ಸುಂಕ ವಿಧಿಸಿತ್ತು.

