ಕಾಂಗೊ: ಅಮೆರಿಕದ ಚಿಕಾಗೊ ಬಳಿಯ ಹೆದ್ದಾರಿಯೊಂದರಲ್ಲಿ ನಡೆದ ರಸ್ತೆ ಅಪಘಾತದಲ್ಲಿ 25 ವರ್ಷದ ಭಾರತೀಯ ವಿದ್ಯಾರ್ಥಿನಿ ಮೃತಪಟ್ಟಿದ್ದು, ಉಳಿದ ಆರು ಮಂದಿ ಗಾಯಗೊಂಡಿದ್ದಾರೆ.
ಮೃತ ವಿದ್ಯಾರ್ಥಿನಿಯನ್ನು ಮೂಲತಃ ತೆಲಂಗಾಣದ ನಲಗೊಂಡ ಜಿಲ್ಲೆಯ, ಸದ್ಯ ಚಿಕಾಗೊ ನಿವಾಸಿಯಾದ ನವ್ಯ ಗಡುಸು ಎಂದು ಗುರುತಿಸಲಾಗಿದೆ.
ಇಂಡಿಯಾನಾದ ಲೇಕ್ ಕೌಂಟ್ ನಲ್ಲಿರುವ ಕ್ರೌನ್ ಪಾಯಿಂಟ್ ಬಳಿಯ ಇಂಟರ್ ಸ್ಟೇಟ್ 65 ಬಳಿ ಶನಿವಾರ ರಾತ್ರಿ ಈ ಅಪಘಾತ ಸಂಭವಿಸಿದೆ.
ರವಿವಾರ ಸ್ಥಳೀಯ ಸಮಯ ಬೆಳಗ್ಗೆ 12.16ಕ್ಕೆ ನವ್ಯ ಗಡುಸು ಮೃತಪಟ್ಟಿದ್ದಾರೆ ಎಂದು ಲೇಕ್ ಕೌಂಟಿ ಕೊರೊನೆರ್ಸ್ ಕಚೇರಿ ತಿಳಿಸಿದೆ.
ವಿದ್ಯಾರ್ಥಿನಿ ನಿಧನಕ್ಕೆ ಚಿಕಾಗೊದಲ್ಲಿನ ಪ್ರಧಾನ ಭಾರತೀಯ ದೂತಾವಾಸ ಕಚೇರಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಭಾರತೀಯ ದೂತಾವಾಸ, "ಚಿಕಾಗೊದ ಬಳಿ ಭಾರತೀಯ ವಿದ್ಯಾರ್ಥಿನಿ ನವ್ಯ ಗಡುಸು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದರಿಂದ ನಮಗೆ ತೀವ್ರ ದುಃಖವಾಗಿದೆ. ಈ ಕಷ್ಟದ ಸಮಯದಲ್ಲಿ ಆಕೆಯ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಗೆ ಸಂತಾಪ ಸೂಚಿಸುತ್ತೇವೆ" ಎಂದು ಹೇಳಿದೆ.

