ವಾಷಿಂಗ್ಟನ್: ಶಾಂತಿ ಮಾತುಕತೆ ನಡೆಯುತ್ತಿರುವ ಹಿನ್ನಲೆಯಲ್ಲಿ ಇರಾನ್ ವಿರುದ್ಧ ಈ ಹಿಂದೆ ಯೋಜಿಸಲಾಗಿದ್ದ ಮಿಲಿಟರಿ ದಾಳಿಯನ್ನು ಅಮೆರಿಕ ಸ್ಥಗಿತಗೊಳಿಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.
ಕತಾರ್‌ನ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ, ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಮತ್ತು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸೇರಿದಂತೆ ಪ್ರಮುಖ ಗಲ್ಫ್ ನಾಯಕರ ಮನವಿಯನ್ನು ಪರಿಗಣಿಸಿ ಸದ್ಯಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದಾಗಿ ಟ್ರುತ್ ಸೋಷಿಯಲ್‌ನಲ್ಲಿನ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಗಂಭೀರ ಮಾತುಕತೆಗಳು ನಡೆಯುತ್ತಿವೆ. ಹಾಗಾಗಿ, ರಾಜತಾಂತ್ರಿಕ ಪ್ರಗತಿ ಸಾಧ್ಯವಿದೆ ಎಂದು ಹೇಳಿದ್ದಾರೆ.
ಅಮೆರಿಕ, ಪಶ್ಚಿಮ ಏಷ್ಯಾದ ಎಲ್ಲ ದೇಶಗಳು ಮತ್ತು ಅದರಾಚೆಗೂ ಸ್ವೀಕಾರಾರ್ಹವಾದ ಒಪ್ಪಂದವನ್ನು ಮಾಡಿಕೊಳ್ಳಲಾಗುವುದು ಎಂದು ಗಲ್ಫ್ ನಾಯಕರು ನಂಬಿದ್ದಾರೆ ಎಂದು ಅವರು ಹೇಳಿದ್ದಾರೆ.
'ಮೇಲೆ ತಿಳಿಸಿದ ನಾಯಕರ ಬಗ್ಗೆ ನನಗೆ ಇರುವ ಗೌರವದ ಆಧಾರದ ಮೇಲೆ, ನಾಳೆ ಇರಾನ್ ಮೇಲಿನ ನಿಗದಿತ ದಾಳಿಯನ್ನು ನಡೆಸದಿರಲು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ಜನರಲ್ ಡೇನಿಯಲ್ ಕೇನ್ ಮತ್ತು ಅಮೆರಿಕ ಮಿಲಿಟರಿಗೆ ಸೂಚಿಸಿದ್ದೇನೆ' ಎಂದು ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಆದರೂ, ಸ್ವೀಕಾರಾರ್ಹ ಒಪ್ಪಂದಕ್ಕೆ ಬರದಿದ್ದರೆ ಇರಾನ್ ಮೇಲೆ ಪೂರ್ಣ ಪ್ರಮಾಣದ ದೊಡ್ಡ ದಾಳಿಗೆ ಸಿದ್ಧರಾಗಿರಲು ಅವರಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.

