ವಾಷಿಂಗ್ಟನ್: ರಷ್ಯಾ ತೈಲ ಖರೀದಿಯ ಮೇಲೆ ವಿಧಿಸಿರುವ ನಿರ್ಬಂಧಗಳಿಗೆ ನೀಡಲಾಗಿದ್ದ ವಿನಾಯಿತಿಯನ್ನು ಅಮೆರಿಕ ಒಂದು ತಿಂಗಳವರೆಗೆ ವಿಸ್ತರಿಸಿದೆ. ಜತೆಗೆ ರಷ್ಯಾದ ತೈಲದ ಮೇಲಿನ ಸಾಮಾನ್ಯ ಪರವಾನಗಿಯನ್ನು ನವೀಕರಿಸಿದೆ.
ಏಪ್ರಿಲ್ 17ರಂದು ಅಥವಾ ಅದಕ್ಕಿಂತ ಮೊದಲು ಸಮುದ್ರ ಮಾರ್ಗದಲ್ಲಿ ಸಾಗಣೆ ಮಾಡುತ್ತಿದ್ದ ರಷ್ಯಾ ತೈಲದ ಮೇಲಿನ ನಿರ್ಬಂಧಗಳ ವಿನಾಯಿತಿಯನ್ನು ಜೂನ್ 17ರವರೆಗೆ ವಿಸ್ತರಿಸಿ ಅಮೆರಿಕ ಹಣಕಾಸು ಇಲಾಖೆಯು ಆದೇಶ ಹೊರಡಿಸಿದೆ.
ಮಾರ್ಚ್ 5ರಂದು ಅಮೆರಿಕವು ಭಾರತಕ್ಕೆ ತೈಲ ಖರೀದಿ ಮೇಲಿನ ನಿರ್ಬಂಧದಿಂದ 30 ದಿನಗಳವರೆಗೆ ವಿನಾಯಿತಿ ನೀಡಿತ್ತು. ರಷ್ಯಾದ ತೈಲ ಖರೀದಿಸುವುದಕ್ಕೂ ಭಾರತಕ್ಕೆ ಅನುಮತಿ ನೀಡಿತ್ತು. ಕೆಲ ದಿನಗಳ ನಂತರ, ಈ ವಿನಾಯಿತಿಯನ್ನು ಇತರ ರಾಷ್ಟ್ರಗಳಿಗೂ ವಿಸ್ತರಿಸಿತ್ತು. ಇದು ಏಪ್ರಿಲ್ 11ರಂದು ಮುಕ್ತಾಯಗೊಂಡಿತ್ತು.
ರಷ್ಯಾದ ತೈಲ ಖರೀದಿಯ ಮೇಲಿನ ನಿರ್ಬಂಧಗಳಿಂದ ಭಾರತ ಮತ್ತು ಇತರ ದೇಶಗಳಿಗೆ ವಿನಾಯಿತಿ ನೀಡುವ ಈ ಸಾಮಾನ್ಯ ಪರವಾನಗಿಯನ್ನು ಒಂದು ತಿಂಗಳ ಅವಧಿಗೆ ಮತ್ತೆ ವಿಸ್ತರಿಸಲಾಗಿದೆ.
ಅಮೆರಿಕ ಹೊರಡಿಸಿರುವ ಈ ಸಾಮಾನ್ಯ ಪರವಾನಗಿಯು ಇರಾನ್, ಉತ್ತರ ಕೊರಿಯಾ, ಕ್ಯೂಬಾ ಅಥವಾ ಉಕ್ರೇನ್‌ನ ಕೆಲವು ಭಾಗಗಳಲ್ಲಿರುವ ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಜಂಟಿ ಉದ್ಯಮದೊಂದಿಗಿನ ವಹಿವಾಟುಗಳಿಗೆ ಅನ್ವಯಿಸುವುದಿಲ್ಲ.

