ಓಸ್ಲೋ: ಐಸ್‌ಲ್ಯಾಂಡ್, ಫಿನ್‌ಲ್ಯಾಂಡ್ ಮತ್ತು ಡೆನ್ಮಾರ್ಕ್ ಪ್ರಧಾನಿಗಳ ಜೊತೆ ಪ್ರತ್ಯೇಕ ಸಭೆಗಳಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದು, ವ್ಯಾಪಾರ ಹಾಗೂ ನವೀಕರಿಸಬಹುದಾದ ಇಂಧನದಂತಹ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸುವುದಕ್ಕೆ ಒತ್ತು ನೀಡಿದ್ದಾರೆ.
3ನೇ ಭಾರತ-ನಾರ್ಡಿಕ್ ಶೃಂಗಸಭೆಗೂ ಮುನ್ನ ಈ ಪ್ರತ್ಯೇಕ ಸಭೆಗಳು ನಡೆದಿವೆ.
ಐಸ್‌ಲ್ಯಾಂಡ್ ಪ್ರಧಾನಿ ಕ್ರಿಸ್ಟ್ರುನ್ ಫ್ರಾಸ್ಟಾಡೊಟೀರ್, ಫಿನ್‌ಲ್ಯಾಂಡ್ ಪ್ರಧಾನಿ ಪೆಟ್ಟೆರಿ ಒರ್ಪೊ ಮತ್ತು ಡೆನ್ಮಾರ್ಕ್ ಪ್ರಧಾನಿ ಮ್ಯಾಟೆ ಫ್ರೆಡೆರಿಕ್ಸೆನ್ ಅವರೊಂದಿಗೆ ಪ್ರಧಾನಿ ಮೋದಿ ಚರ್ಚಿಸಿದ್ದಾರೆ.
ಈ ಸಂದರ್ಭದಲ್ಲಿ ಭಾರತ ಹಾಗೂ ನಾರ್ಡಿಕ್ ದೇಶಗಳ ನಡುವಣ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯ ಕುರಿತು ಚರ್ಚಿಸಲಾಯಿತು.
ನಾರ್ಡಿಕ್ ದೇಶಗಳು ಉತ್ತರ ಯುರೋಪ್ ಹಾಗೂ ಉತ್ತರ ಅಟ್ಲಾಂಟಿಕ್‌ನಲ್ಲಿರುವ ಭೌಗೋಳಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪ್ರದೇಶವನ್ನು ಪ್ರತಿನಿಧಿಸುತ್ತದೆ. ಇದು ಡೆನ್ಮಾರ್ಕ್, ಫಿನ್‌ಲ್ಯಾಂಡ್, ಐಸ್‌ಲ್ಯಾಂಡ್, ನಾರ್ವೆ ಹಾಗೂ ಸ್ವೀಡನ್ ದೇಶಗಳನ್ನು ಒಳಗೊಂಡಿವೆ.
ಐದು ನಾರ್ಡಿಕ್ ರಾಷ್ಟ್ರಗಳ ಒಟ್ಟು ಜಿಡಿಪಿ 1.9 ಟ್ರಿಲಿಯನ್ ಡಾಲರ್‌ಗೂ ಹೆಚ್ಚಿದೆ.
3ನೇ ಭಾರತ-ನಾರ್ಡಿಕ್ ಶೃಂಗದಲ್ಲಿ ತಂತ್ರಜ್ಞಾನ, ನಾವೀನ್ಯತೆ, ಹಸಿರು ಪರಿವರ್ತನೆ, ನವೀಕರಿಸಬಹುದಾದ ಇಂಧನ, ಸುಸ್ಥಿರತೆ, ಆರ್ಥಿಕತೆ, ರಕ್ಷಣೆ, ಬಾಹ್ಯಾಕಾಶ ಮತ್ತು ಆರ್ಕ್ಟಿಕ್‌ನಂತಹ ಕ್ಷೇತ್ರಗಳ್ಲಲಿ ನಾರ್ಡಿಕ್ ರಾಷ್ಟ್ರಗಳೊಂದಿಗೆ ಹೆಚ್ಚಿನ ಕಾರ್ಯತಂತ್ರದ ಪಾಲುದಾರಿಕೆ ನಿರೀಕ್ಷಿಸಲಾಗುತ್ತಿದೆ.

