HEALTH TIPS

ಪ್ರಶ್ನೆ ಸ್ವೀಕರಿಸದೇ ತೆರಳಿದ ಮೋದಿ: ನಾವೇಕೆ ನಿಮ್ಮನ್ನು ನಂಬಬೇಕು ಎಂದ ಪತ್ರಕರ್ತೆ

 ನವದೆಹಲಿ: 3ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರು ನಾರ್ವೆಗೆ ಭೇಟಿ ನೀಡಿದ್ದ ಸಂದರ್ಭ ನಾಟಕೀಯ ಬೆಳವಣಿಗೆ ನಡೆದಿದೆ. ನಾರ್ವೆಯ ಪತ್ರಕರ್ತೆಯೊಬ್ಬರು ಮಾಧ್ಯಮಗಳಿಂದ ಕೆಲವು ಪ್ರಶ್ನೆಗಳನ್ನು ಸ್ವೀಕರಿಸುವಂತೆ ಪ್ರಧಾನಿಯನ್ನು ಒತ್ತಾಯಿಸಿದ್ದಾರೆ. 


ಆದರೆ, ಅದನ್ನು ಕೇಳಿಯೂ ಕೇಳದಂತೆ ಮೋದಿ ಕೊಠಡಿಯಿಂದ ಹೊರನಡೆಯುತ್ತಿರುವುದು ಕಂಡುಬಂದಿದೆ.

ನಂತರ, ಪ್ರಧಾನಿ ಮೋದಿ ಭೇಟಿ ಕುರಿತು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಒಸ್ಲೊದಲ್ಲಿ ನಡೆಸಲಿರುವ ಪತ್ರಿಕಾಗೋಷ್ಠಿಗೆ ಆಗಮಿಸುವಂತೆ ಪತ್ರಕರ್ತೆ ಹೆಲ್ಲೆ ಲಿಂಗ್ ಅವರನ್ನು ಭಾರತದ ರಾಯಭಾರ ಕಚೇರಿಯು ಆಹ್ವಾನಿಸಿತು. ಆ ಪತ್ರಿಕಾಗೋಷ್ಠಿಯು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು.

ಭಾರತವನ್ನು ಏಕೆ ನಂಬಬೇಕು? ಎಂದು ಪತ್ರಕರ್ತೆ ಲಿಂಗ್ ನೇರವಾಗಿ ಪ್ರಶ್ನಿಸಿದರು.

'ಭಾರತದ ಜೊತೆ ನಾರ್ವೆ ಪಾಲುದಾರಿಕೆ ಬಲಗೊಳ್ಳುತ್ತಿದೆ. ಆದರೆ, ನಾವು ಏಕೆ ನಿಮ್ಮನ್ನು(ಭಾರತ) ನಂಬಬೇಕು? ನಿಮ್ಮ ದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಪ್ರಯತ್ನಿಸುತ್ತೀರೀ ಎಂದು ನೀವು ಭರವಸೆ ನೀಡಬಲ್ಲಿರಾ? ಭವಿಷ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಭಾರತೀಯ ಪತ್ರಕರ್ತರಿಂದ ನಿರ್ಣಾಯಕ ಪ್ರಶ್ನೆಗಳಿಗೆ ಉತ್ತರಿಸಲು ಆರಂಭಿಸುತ್ತಾರೆಯೇ? ಸಾಧ್ಯವಾದರೆ ನೀವು ತಕ್ಷಣ ಉತ್ತರಿಸಬೇಕೆಂದು ನಾನು ಬಯಸುತ್ತೇನೆ'ಎಂದು ಲಿಂಗ್ ಕೇಳಿದ್ದಾರೆ.

ನಂತರ ನಡೆದ ಚರ್ಚೆಯಲ್ಲಿ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಬೇರೆ ದೇಶಗಳಿಗೆ ಸಹಾಯ ನೀಡುವಲ್ಲಿ ಭಾರತದ ಪಾತ್ರ, ಭಾರತೀಯ ಸಂವಿಧಾನವು ತನ್ನ ನಾಗರಿಕರಿಗೆ ಖಾತರಿಪಡಿಸಿದ ಮೂಲಭೂತ ಹಕ್ಕುಗಳು ಮತ್ತು ಭಾರತದ ನಾಗರಿಕತೆಯ ಇತಿಹಾಸವನ್ನು ಎತ್ತಿ ತೋರಿಸುವ ಕುರಿತಂತೆ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಸಿ.ಬಿ. ಜಾರ್ಜ್ ದೀರ್ಘ ಪ್ರತಿಕ್ರಿಯೆ ನೀಡಿದರು.

'ನೀವು ಸುತ್ತಲೂ ಕಣ್ಣಾಡಿಸಿದರೆ ಭಾರತವು ಪ್ರಪಂಚದ ಎಲ್ಲೆಡೆ ಸಂಪರ್ಕ ಹೊಂದಿರುವುದನ್ನು ನೋಡುತ್ತೀರಿ. ಫೋನ್‌ಗಳಲ್ಲಿ ನೀವು ನೋಡುವ ಸಂಖ್ಯೆ ಭಾರತ ಮೂಲದ್ದಾಗಿದೆ. ಶೂನ್ಯವು ಭಾರತದಲ್ಲಿ ಹುಟ್ಟಿದೆ. ಚೆಸ್ ಭಾರತದಲ್ಲಿ ಜನ್ಮತಾಳಿದೆ. ಆದ್ದರಿಂದ ನಾವು ನಮ್ಮ ನಾಗರಿಕತೆಯ ಬಗ್ಗೆ ಹೆಮ್ಮೆಪಡುತ್ತೇವೆ. ಇಂದು ಜಗತ್ತು ಮೆಚ್ಚುವ ಯೋಗವು ಭಾರತ ಮೂಲದ್ದಾಗಿದೆ. ಭಾರತವು ಜಗತ್ತು ಮೆಚ್ಚಿದ ಮಹಾಕಾವ್ಯಗಳನ್ನು ಹೊಂದಿದೆ'ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಜಾರ್ಜ್, ಅಜ್ಞಾನಿ ಎನ್‌ಜಿಒಗಳ ವರದಿ ಭಾರತದ ಬಗ್ಗೆ "ತಪ್ಪು ತಿಳುವಳಿಕೆಗೆ ಕಾರಣವಾಗಿದೆ ಎಂದಿದ್ದಾರೆ.

ದೇಶದಲ್ಲಿ ಹಲವು ಸುದ್ದಿ ವಾಹಿನಿಗಳಿದ್ದು, ದಿನಕ್ಕೆ ನೂರಾರು ಬ್ರೇಕಿಂಗ್ ನ್ಯೂಸ್ ಬರುತ್ತದೆ. ದೇಶದ ಬೆಳವಣಿಗೆಗಗಳ ಬಗ್ಗೆ ಜನರಿಗೆ ಅರಿವಿದೆ. ಕೆಲ ಅಜ್ಞಾನಿ ಎನ್‌ಜಿಒ ವರದಿ ಅವುಗಳನ್ನು ಸುಳ್ಳಾಗಿಸಲಾರದು ಎಂದಿದ್ದಾರೆ.

ಜನರಿಗೆ ನಿರ್ದಿಷ್ಟ ಹಕ್ಕುಗಳು, ಮೂಲಭೂತ ಹಕ್ಕುಗಳನ್ನು ಕೊಟ್ಟಿರುವ ಸಂವಿಧಾನವನ್ನು ನಾವು ಹೊಂದಿದ್ದೇವೆ. ನಮ್ಮ ದೇಶದಲ್ಲಿ ಅತ್ಯಂತ ಪ್ರಮುಖವಾಗಿ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಿದ್ದೇವೆ. 1947ರಲ್ಲಿ ಸ್ವಾತಂತ್ರ್ಯ ಸಿಕ್ಕಾಗಿನಿಂದಲೇ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ್ದೇವೆ, ಕೆಲ ದೇಶಗಳಲ್ಲಿ ಭಾರತ ಮಹಿಳೆಯರಿಗೆ ಮತದಾನದ ಹಕ್ಕು ಕೊಟ್ಟ ದಶಕಗಳ ಬಳಿಕ ಅದನ್ನು ಅನುಸರಿಸಲಾಗಿದೆ. ನಾವು ಸಮಾನತೆ, ಮಾನವ ಹಕ್ಕುಗಳ ಬಗ್ಗೆ ನಂಬಿಕೆ ಇಟ್ಟಿದ್ದೇವೆ. ಸರ್ಕಾರ ಬದಲಿಸುವ ಹಕ್ಕಾಗಿ ಮತದಾನದ ಹಕ್ಕು ನೀಡಿದ್ದೇವೆ. ಮಾನವ ಹಕ್ಕುಗಳಿಗೆ ಇದಕ್ಕಿಂತ ಉದಾಹರಣೆ ಬೇಕೆ? ಭಾರತದಲ್ಲಿ ಆಗುತ್ತಿರುವುದು ಸಹ ಇದೇ ಎಂದಿದ್ದಾರೆ.

ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಕುಸಿದ ಭಾರತ

ಜಾಗತಿಕ ಮಾಧ್ಯಮ ಕಾವಲುಸಂಸ್ಥೆ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಪ್ರಕಟಿಸಿದ 2026ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತವು 180 ದೇಶಗಳ ಪೈಕಿ 157ನೇ ಸ್ಥಾನಕ್ಕೆ ಕುಸಿದಿದೆ.

ಭಾರತದಲ್ಲಿ ಸ್ವತಂತ್ರ ಮಾಧ್ಯಮ ಸಂಸ್ಥೆಗಳ ಮೇಲಿನ ನ್ಯಾಯಾಂಗ ಕಿರುಕುಳ ತೀವ್ರಗೊಳ್ಳುತ್ತಿದೆ. ಕ್ರಿಮಿನಲ್ ಕಾನೂನು, ಮಾನನಷ್ಟ ಮತ್ತು ರಾಷ್ಟ್ರೀಯ ಭದ್ರತಾ ಕಾನೂನುಗಳ ಮೂಲಕ ನೇರವಾಗಿ ಪತ್ರಕರ್ತರನ್ನು ಗುರಿಯಾಗಿಸಿಕೊಂಡು ಹೆಚ್ಚುತ್ತಿರುವ ಕಿರುಕುಳ ಇದಕ್ಕೆ ಕಾರಣ ಎಂದು ವರದಿ ತಿಳಿಸಿದೆ.

2014ರಲ್ಲಿ ದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಮೋದಿ, ಸತತ ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಆದರೆ, ಈ ವರೆಗೆ ಪತ್ರಿಕಾಗೋಷ್ಠಿ ಕರೆದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಹೋಗಿಲ್ಲ. ರೆಕಾರ್ಡ್ ಹೇಳಿಕೆಗಳನ್ನು ಜನರ ಮುಂದಿಡುತ್ತಿದ್ದಾರೆ.










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries