ಅಬುಧಾಬಿ,: ಸತತ ಎರಡನೇ ದಿನವೂ ಯುಎಇ ಮೇಲೆ ಇರಾನ್ ಕ್ಷಿಪಣಿಗಳು ಮತ್ತು ಡ್ರೋನ್‍ಗಳಿಂದ ದಾಳಿ ನಡೆಸಿರುವುದಾಗಿ ಯುಎಇ ರಕ್ಷಣಾ ಇಲಾಖೆ ಮಂಗಳವಾರ ಹೇಳಿದೆ.
ಮಂಗಳವಾರ ಇರಾನ್ ಪ್ರಯೋಗಿಸಿದ ಕ್ರೂಸ್ ಕ್ಷಿಪಣಿಗಳು ಮತ್ತು ಡ್ರೋನ್‍ಗಳನ್ನು ತನ್ನ ವಾಯುರಕ್ಷಣಾ ವ್ಯವಸ್ಥೆ ತಡೆದಿದೆ.
ಒಂದು ಕ್ರೂಸ್ ಕ್ಷಿಪಣಿ ಸಮುದ್ರಕ್ಕೆ ಪತನಗೊಂಡಿದೆ. ವೈಮಾನಿಕ ದಾಳಿಯ ಎಚ್ಚರಿಕೆ ನೀಡುವ ಸೈರನ್ ಮೊಳಗಿಸಲಾಗಿದ್ದು ಕ್ಷಿಪಣಿಗಳು ಮತ್ತು ಡ್ರೋನ್ ಬೆದರಿಕೆಯನ್ನು ಹಿಮ್ಮೆಟ್ಟಿಸಲು ಯುಎಇಯ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ಹೇಳಿಕೆ ತಿಳಿಸಿದೆ.
ಇರಾನ್ ಸೋಮವಾರ ಯುಎಇಯ ಫುಜೈರಾ ತೈಲ ಉದ್ಯಮ ವಲಯದ ಮೇಲೆ 12 ಬ್ಯಾಲಿಸ್ಟಿಕ್ ಕ್ಷಿಪಣಿಗಳು, 4 ಡ್ರೋನ್‍ಗಳು ಮತ್ತು ಮೂರು ಕ್ರೂಸ್ ಕ್ಷಿಪಣಿಗಳನ್ನು ಪ್ರಯೋಗಿಸಿದ್ದು ಇವುಗಳನ್ನು ಯುಎಇ ವಾಯುರಕ್ಷಣಾ ವ್ಯವಸ್ಥೆ ತುಂಡರಿಸಿದೆ. ಕ್ಷಿಪಣಿಯ ಅವಶೇಷ ಬಿದ್ದು ಮೂವರು ಭಾರತೀಯರು ಗಾಯಗೊಂಡಿರುವುದಾಗಿ ವರದಿಯಾಗಿದೆ.

