ಉಪ್ಪಳ: ಸಮೀಪದ ಉಪ್ಪಳ ಕೈಕಂಬದಲ್ಲಿ ಬಾಯಾರು ರಸ್ತೆಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಬಸ್ ತಂಗುದಾಣವು ಪ್ರಯಾಣಿಕರಿಗೆ ಹಾಗೂ ಸ್ಥಳೀಯರಿಗೆ ಯಾವುದೇ ಪ್ರಯೋಜನಕ್ಕೆ ಬಾರದೆ ಸಂಪೂರ್ಣ ನಿರುಪಯುಕ್ತವಾಗಿ ಉಳಿದುಕೊಂಡಿದೆ.
ಬಾಯಾರು ಭಾಗಕ್ಕೆ ಸಂಚರಿಸುವ ಖಾಸಗಿ ಬಸ್‌ಗಳು ಸೇರಿದಂತೆ ಹಲವು ಸಾರ್ವಜನಿಕ ವಾಹನಗಳು ತಂಗುದಾಣದ ಎದುರು ನಿಲ್ಲುತ್ತಿಲ್ಲ. ಬದಲಿಗೆ, ಜನದಟ್ಟಣೆಯ ಕೈಕಂಬ ಜಂಕ್ಷನ್ ಹಾಗೂ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ಮತ್ತು ಇಳಿಸುವುದನ್ನು ಮಾಡುತ್ತಿರುವುದರಿಂದ ಈ ಭಾಗದಲ್ಲಿ ಪ್ರತಿದಿನ ತೀವ್ರ ಸಂಚಾರ ದಟ್ಟಣೆ (ಟ್ರಾಫಿಕ್ ಜಾಮ್) ಉಂಟಾಗುತ್ತಿದೆ.
ಬಾಯಾರು ಕಡೆಗೆ ತೆರಳುವ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಸರ್ವಿಸ್ ರಸ್ತೆಯಲ್ಲೇ ಬಸ್‌ಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಇತರ ವಾಹನಗಳ ಮುಕ್ತ ಸಂಚಾರಕ್ಕೆ ಭಾರೀ ಅಡಚಣೆಯಾಗುತ್ತಿದೆ. ಜತೆಗೆ, ಕೈಕಂಬದಲ್ಲಿ ಇಳಿಯಬೇಕಾದ ಪ್ರಯಾಣಿಕರನ್ನು ನಿಗದಿತ ಬಸ್ ತಂಗುದಾಣದಲ್ಲಾಗಲಿ ಅಥವಾ ಸುರಕ್ಷಿತ ಸ್ಥಳಗಳಲ್ಲಾಗಲಿ ಇಳಿಸದೆ, ಜಂಕ್ಷನ್ ಸಮೀಪ ರಸ್ತೆಯ ಮಧ್ಯದಲ್ಲೇ ಇಳಿಸಲಾಗುತ್ತಿದೆ. ಇದರಿಂದ ರಸ್ತೆ ಅಪಘಾತಗಳ ಸಂಭವ ಹೆಚ್ಚಾಗಿದ್ದು, ಪಾದಚಾರಿಗಳು ಜೀವಭಯದಲ್ಲೇ ಸಂಚರಿಸುವಂತಾಗಿದೆ.
ಪ್ರಸ್ತುತ ಇರುವ ಬಸ್ ತಂಗುದಾಣದ ಸಮೀಪದಲ್ಲೇ ಈ ಹಿಂದೆ ನಿರ್ಮಿಸಲಾಗಿದ್ದ ಇನ್ನೊಂದು ತಂಗುದಾಣವೂ ಸೂಕ್ತ ನಿರ್ವಹಣೆಯಿಲ್ಲದೆ ಗಿಡಗಂಟಿ, ಪೊದೆಗಳಿಂದ ಆವೃತವಾಗಿ ಹಾಳಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಸುಸಜ್ಜಿತ ತಂಗುದಾಣಗಳಿದ್ದರೂ, ಬಸ್‌ಗಳು ಜಂಕ್ಷನ್‌ನಲ್ಲೇ ಅಡ್ಡಾದಿಡ್ಡಿ ನಿಂತು ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಠಿಣ ಕ್ರಮಕ್ಕೆ ಸಾರ್ವಜನಿಕರ ಆಗ್ರಹ:
ಪ್ರಯಾಣಿಕರು ನಿಗದಿತ ಬಸ್ ತಂಗುದಾಣಗಳನ್ನು ಸಮರ್ಪಕವಾಗಿ ಬಳಸುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಬಸ್‌ಗಳನ್ನು ನಿಲ್ಲಿಸುವುದು ಹಾಗೂ ಜಂಕ್ಷನ್‌ನಲ್ಲೇ ಪ್ರಯಾಣಿಕರನ್ನು ಹತ್ತಿಸುವುದು-ಇಳಿಸುವುದನ್ನು ತಕ್ಷಣವೇ ನಿರ್ಬಂಧಿಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಸಂಚಾರಿ ಪೊಲೀಸರು ಹಾಗೂ ಮೋಟಾರು ವಾಹನ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಾಗರಿಕರು ಮತ್ತು ವ್ಯಾಪಾರಿಗಳು ಬಲವಾಗಿ ಒತ್ತಾಯಿಸಿದ್ದಾರೆ.

.jpg)
.jpg)
