ಕಾಸರಗೋಡು: ಯಕ್ಷಗಾನದ ಮೇರು ಕಲಾವಿದ, ಲಯಬ್ರಹ್ಮ ದಿವಾಣ ಭೀಮ ಭಟ್ಟರ ಸಂಸ್ಮರಣೆಯ ಅಂಗವಾಗಿ, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಯಕ್ಷಾನುಗ್ರಹ ವಾಟ್ಸಾಪ್ ಬಳಗದ ಜಂಟಿ ಆಶ್ರಯದಲ್ಲಿ ‘ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ...!’ ಸರಣಿಯಡಿ ಯಕ್ಷಗಾನ ಹಿಮ್ಮೇಳ ಕಲಾವಿದರ ರಾಜ್ಯಮಟ್ಟದ ವಿಶೇಷ ಶಿಬಿರವು ಭಾನುವಾರ ಸಿರಿಬಾಗಿಲಿನ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರದಲ್ಲಿ ದಿನಪೂರ್ತಿ ವೈಭವದಿಂದ ಜರುಗಿತು.
ಕಾರ್ಯಕ್ರಮವನ್ನು ಹಿರಿಯ ಹಿಮ್ಮೇಳ ಗುರುಗಳಾದ ಶ್ರೀ ಹರಿ ನಾರಾಯಣ ಬೈಪಡಿತ್ತಾಯ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ನಂತರ ವೇದಿಕೆಯಲ್ಲಿದ್ದ ಗಣ್ಯರು ಹಾಗೂ ಅತಿಥಿಗಳು ಬೆಳಗಿದ ದೀಪಕ್ಕೆ ತೈಲಧಾರೆ ಎರೆದು ವಿಶಿಷ್ಟ ರೀತಿಯಲ್ಲಿ ಸಾಕ್ಷಿಯಾದರು.
ಸಂಸ್ಮರಣಾ ನುಡಿಗಳನ್ನಾಡಿದ ಖ್ಯಾತ ಅರ್ಥದಾರಿ ಶ್ರೀ ರಾಧಾಕೃಷ್ಣ ಕಲ್ಚಾರ್ ವಿಟ್ಲ, "ಯಕ್ಷಗಾನ ಹಿಮ್ಮೇಳ ಕ್ಷೇತ್ರಕ್ಕೆ ಲಯಬ್ರಹ್ಮ ದಿವಾಣ ಭೀಮ ಭಟ್ಟರ ಕೊಡುಗೆ ಅವಿಸ್ಮರಣೀಯ. ಅವರ ನೆನಪಿನಲ್ಲಿ ಇಂತಹ ಯುವ ಹಿಮ್ಮೇಳ ಕಲಾವಿದರ ಶಿಬಿರ ಆಯೋಜಿಸಿರುವುದು ಅತ್ಯಂತ ಶ್ಲಾಘನೀಯ ಹಾಗೂ ಕಲೆಯ ಉಳಿವಿಗೆ ಅಗತ್ಯವಾದ ಅರ್ಥಪೂರ್ಣ ಹೆಜ್ಜೆ" ಎಂದು ಸ್ಮರಿಸಿದರು.
ಹುಬ್ಬಳ್ಳಿಯ ಅನನ್ಯ ಫೀಡ್ಸ್ ಸಂಸ್ಥೆಯ ನಿರ್ದೇಶಕರಾದ ಶ್ರೀ ದಿವಾಣ ಗೋವಿಂದ ಭಟ್ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ಶ್ರೀ ಗೋವಿಂದ ನಾಯಕ್ ಪಾಲೆಚ್ಚಾರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ವಿದ್ವಾಂಸರು ಹಾಗೂ ಕಲಾವಿದರಾದ ಶ್ರೀ ಸುಬ್ರಾಯ ಸಂಪಾಜೆ, ಶ್ರೀ ಗೋಪಾಲಕೃಷ್ಣ ಭಟ್ ಪುಂಡಿಕಾಯಿ ಮತ್ತು ಶ್ರೀ ಅಂಡಾಲ ದೇವಿ ಪ್ರಸಾದ್ ಶೆಟ್ಟಿ ಭಾಗವಹಿಸಿ ಯುವ ಕಲಾವಿದರಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಪ್ರಾತ್ಯಕ್ಷಿಕೆ ಹಾಗೂ ತಜ್ಞರ ಗೋಷ್ಠಿ:
ಗೋಷ್ಠಿಯ ಅಂಗವಾಗಿ ನಡೆದ ಪ್ರಾಯೋಗಿಕ ಪ್ರಾತ್ಯಕ್ಷಿಕೆಯಲ್ಲಿ ವಿದುಷಿ ಶ್ರೀಮತಿ ಶಾಲಿನಿ ಹೆಬ್ಬಾರ್, ತಲ್ಪನಾಜೆ ವೆಂಕಟರಮಣ ಭಟ್, ಪ್ರದೀಪ ಗಟ್ಟಿ, ಹರಿಪ್ರಸಾದ್ ಕಾರಂತ, ಲಕ್ಷ್ಮೀನಾರಾಯಣರಾವ್ ಅಡೂರು, ಮುರಾರಿ ಕಂಬಳಿತ್ತಾಯ, ಅವಿನಾಶ ಬೈಪಡಿತಾಯ ಹಾಗೂ ಗಣೇಶ್ ಭಟ್ ಬೆಳಾಲು ಪಾಲ್ಗೊಂಡು ಹಿಮ್ಮೇಳದ ಸೂಕ್ಷ್ಮತೆಗಳನ್ನು ಪ್ರಸ್ತುತಪಡಿಸಿದರು. ಶ್ರೀ ರಾಜಾರಾಮ ಹೊಳ್ಳ ಕೈರಂಗಳ ಗೋಷ್ಠಿಯ ಸಮರ್ಥ ನಿರ್ವಹಣೆ ಮಾಡಿದರು.
ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಮಾತನಾಡಿ, "ಹಿಮ್ಮೇಳ ಕಲಾವಿದರಿಗೆ ತಾಳ-ಲಯದ ಜತೆಗೆ ರಂಗಪ್ರಜ್ಞೆ ಹಾಗೂ ಪ್ರಸಂಗದ ಆಳವಾದ ಅಧ್ಯಯನ ಅತ್ಯಂತ ಅನಿವಾರ್ಯ" ಎಂದು ಅಭಿಪ್ರಾಯಪಟ್ಟರು.
ಪ್ರತಿಷ್ಠಾನ ಹಾಗೂ ಯಕ್ಷಾನುಗ್ರಹ ಬಳಗದ ಸದಸ್ಯರಾದ ಶ್ರೀ ಯೋಗೀಶರಾವ್ ಚಿಗುರುಪಾದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷಾನುಗ್ರಹ ಬಳಗದ ಹಿರಿಯ ಸದಸ್ಯರಾದ ಶ್ರೀ ಕುಮಾರ ಸುಬ್ರಹ್ಮಣ್ಯ ಅವರು ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಡಾ. ಶ್ರೀಕೃಷ್ಣ ಭಟ್ ಸುಣ್ಣಂಗುಳಿ ಇಡೀ ಗೋಷ್ಠಿಯ ಸಮಗ್ರ ಅವಲೋಕನ ನಡೆಸಿಕೊಟ್ಟರು. ಡಾ. ಶ್ರುತಕೀರ್ತಿ ರಾಜ ಉಜಿರೆ ಕಾರ್ಯಕ್ರಮ ನಿರೂಪಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದೊಂದಿಗೆ ಶಿಬಿರ ಮುಕ್ತಾಯಗೊಂಡಿತು. ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದ ನೂರಕ್ಕೂ ಅಧಿಕ ಹಿಮ್ಮೇಳ ಕಲಾವಿದರು, ಕಟೀಲು ಮೇಳದ ಕಲಾವಿದರು ಹಾಗೂ ಯುವ ಆಸಕ್ತ ವಿದ್ಯಾರ್ಥಿಗಳು ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಯೋಜನ ಪಡೆದರು.



