ಮುಂಬೈ: ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಇಂಧನ ಬೆಲೆ ಏರಿಕೆಯ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ವಿಧಾನಭವನಕ್ಕೆ ಬೈಕ್ ಏರಿ ಬಂದಿದ್ದಾರೆ.
ವಿಧಾನ ಪರಿಷತ್ನ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೈಕ್ ಏರಿ ಬರುವ ಮೂಲಕ ಫಡಣವೀಸ್ ಗಮನ ಸೆಳೆದಿದ್ದಾರೆ.
ಪಶ್ಚಿಮ ಏಷ್ಯಾದ ಉದ್ವಿಗ್ನತೆಯು ಜಾಗತಿಕ ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರುತ್ತಿದ್ದು, ಇಂಧನ ಬಳಕೆ ಕಡಿಮೆ ಮಾಡುವಂತೆ ಪ್ರಧಾನಿ ಮೋದಿ ಅವರು ಜನರಲ್ಲಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಫಡಣವೀಸ್ ಅವರು ದಕ್ಷಿಣ ಮುಂಬೈನಲ್ಲಿರುವ ತಮ್ಮ ಅಧಿಕೃತ ನಿವಾಸ 'ವರ್ಷಾ'ದಿಂದ ವಿಧಾನಭವನದವರೆಗೆ ಸಚಿವ ಆಶಿಶ್ ಶೇಲಾರ್ ಅವರೊಂದಿಗೆ ಬೈಕ್ನಲ್ಲಿ ಪ್ರಯಾಣಿಸಿದ್ದಾರೆ.
ಇಂಧನ ಉಳಿತಾಯದ ಸಂಕೇತವಾಗಿ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಅವರು ಸಂಪುಟ ಸಭೆಗೆ ಹಾಜರಾಗಲು ಕಾರ್ಯಾಲಯಕ್ಕೆ ನಡೆದುಕೊಂಡೇ ಬಂದಿದ್ದಾರೆ.
ವಿದೇಶಿ ವಿನಿಮಯ ಮತ್ತು ಇಂಧನ ಉಳಿಸಲು ಆದ್ಯತೆ ನೀಡುವ ಸಲುವಾಗಿ ಸಚಿವರ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಲಾಗಿದೆ. ಜತೆಗೆ, ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳ ವಿದೇಶಿ ಪ್ರವಾಸ ರದ್ದುಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೋದಿ ಹೇಳಿದ್ದೇನು?
ಈಚೆಗೆ ಹೈದರಾಬಾದ್ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದ ಯುದ್ಧದಿಂದಾಗಿ ಭಾರತದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮಗಳನ್ನು ಎದುರಿಸಲು ಕೆಲವು ಸಲಹೆಗಳನ್ನು ನೀಡಿದ್ದರು.
ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಕಡಿಮೆ ಮಾಡುವುದು, ಮೆಟ್ರೊ ರೈಲು ಬಳಕೆ, ಕಾರ್ಪೂಲಿಂಗ್ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಆದ್ಯತೆ ನೀಡುವುದು. ಕನಿಷ್ಠ ಒಂದು ವರ್ಷದ ಮಟ್ಟಿಗೆ ಚಿನ್ನದ ಖರೀದಿ ಮತ್ತು ವಿದೇಶಿ ಪ್ರವಾಸ ಮುಂದೂಡುವುದು. ಸಾಧ್ಯವಿರುವ ಕಡೆ ವರ್ಕ್ ಫ್ರಮ್ ಹೋಮ್ (ಮನೆಯಿಂದಲೇ ಕೆಲಸ) ಮಾಡುವುದು. ಖಾದ್ಯ ತೈಲ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಮಿತಗೊಳಿಸಿ, ನೈಸರ್ಗಿಕ ಕೃಷಿ ಹಾಗೂ ಸ್ವದೇಶಿ ಉತ್ಪನ್ನಗಳಿಗೆ ಒತ್ತು ನೀಡಬೇಕೆಂದು ಮೋದಿ ಸಲಹೆ ನೀಡಿದ್ದರು.
ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶದ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಈ ಕ್ರಮಗಳು ಅನಿವಾರ್ಯ ಎಂದು ಮೋದಿ ಒತ್ತಿ ಹೇಳಿದ್ದರು.

