ನವದೆಹಲಿ: ಅಗತ್ಯಕ್ಕಿಂತ ಕಡಿಮೆ ಹಾಜರಾತಿ ಹೊಂದಿದ್ದಾರೆ ಎಂಬ ಕಾರಣ ನೀಡಿ ಕಾನೂನು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗದಂತೆ ನಿರ್ಬಂಧ ವಿಧಿಸುವಂತಿಲ್ಲ ಎಂಬ ದೆಹಲಿ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ.
'ಹೈಕೋರ್ಟ್‌ನ ಈ ತೀರ್ಪಿನಿಂದಾಗಿ ದೇಶದಾದ್ಯಂತ ಕಾನೂನು ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ಸಂಕಷ್ಟ ಎದುರಿಸುವಂತಾಗಿದೆ' ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರು ಇದ್ದ ನ್ಯಾಯಪೀಠವು ಈ ಕುರಿತು ಭಾರತೀಯ ವಕೀಲರ ಸಂಘ(ಬಿಸಿಐ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿತು. ಕಳೆದ ವರ್ಷ ನವೆಂಬರ್‌ನಲ್ಲಿ ದೆಹಲಿ ಹೈಕೋರ್ಟ್ ಈ ತೀರ್ಪು ನೀಡಿತ್ತು. ಈ ಕುರಿತು ಜುಲೈ 21ರ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಪೀಠ ನಿರ್ದೇಶನ ನೀಡಿತು.
ಅಮಿಟಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸುಶಾಂತ್ ರೊಹಿಲ್ಲಾ 2017ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಡಿಮೆ ಪ್ರಮಾಣದ ಹಾಜರಾತಿ ಇದ್ದ ಕಾರಣಕ್ಕೆ ಅವರಿಗೆ ಕಿರುಕುಳ ನೀಡಲಾಗುತ್ತಿತ್ತು. ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ, ನಿಗದಿಗಿಂತ ಕಡಿಮೆ ಹಾಜರಾತಿ ಇದ್ದರೂ ಪರೀಕ್ಷೆಗೆ ಹಾಜರಾಗದಂತೆ ಯಾವುದೇ ವಿದ್ಯಾರ್ಥಿಗೆ ನಿರ್ಬಂಧ ವಿಧಿಸುವಂತಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು.
ಬಿಸಿಐನ ಕಾನೂನು ಶಿಕ್ಷಣ ನಿಯಮಗಳ ಪ್ರಕಾರ, ಪರೀಕ್ಷೆಗೆ ಹಾಜರಾಗುವುದಕ್ಕೆ ವಿದ್ಯಾರ್ಥಿಯು ಕನಿಷ್ಠ ಶೇ70ರಷ್ಟು ಹಾಜರಾತಿ ಹೊಂದಿರುವುದು ಕಡ್ಡಾಯ. ವಿಶೇಷ ಪ್ರಕರಣಗಳಲ್ಲಿ ಶೇ65ರಷ್ಟು ಹಾಜರಾತಿ ಇದ್ದರೂ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ.

