ಚೆನ್ನೈ: 234 ಸದಸ್ಯ ಬಲದ ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಆರಂಭಿಕ ಮುನ್ನಡೆ ಹೀಗೆಯೇ ಮುಂದುವರಿದರೆ ನಟ ವಿಜಯ್ ಅವರ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧಿಕಾರಕ್ಕೇರುವುದು ಖಚಿತ ಎನ್ನಲಾಗುತ್ತಿದೆ.
ತಮಿಳುನಾಡಿನಲ್ಲಿ ಸದ್ಯ ಡಿಎಂಕೆ ಸರ್ಕಾರವಿದೆ.
ಸದ್ಯ ನೂರಕ್ಕೂ ಹೆಚ್ಚು ಸ್ಥಾನಗಳಲ್ಲಿ ಟಿವಿಕೆ ಮುನ್ನಡೆ ಕಾಯ್ದುಕೊಂಡಿದೆ. ಎಐಎಡಿಎಂಕೆ 60+ ಹಾಗೂ ಡಿಎಂಕೆ 50+ ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ವಿಜಯ್ ಅವರು ಎರಡು ಕ್ಷೇತ್ರಗಳಲ್ಲಿ (ತಿರುಚ್ಚಿ (ಪೂರ್ವ) ಹಾಗೂ ಪೆರಂಬೂರ್) ಕಣಕ್ಕಿಳಿದಿದ್ದಾರೆ. ಎರಡೂ ಕಡೆ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಡಿಎಂಕೆ, ಎಐಎಡಿಎಂಕೆಗೆ ಪರ್ಯಾಯ!
ಒಮ್ಮೆ ಡಿಎಂಕೆ, ಮತ್ತೊಮ್ಮೆ ಎಐಎಡಿಎಂಕೆ. ಹಲವು ವರ್ಷಗಳಿಂದಲೂ ತಮಿಳುನಾಡಿನ ಅಧಿಕಾರ ಹೀಗೆ ಬದಲಾಗುತ್ತಾ ಬಂದಿತ್ತು. ಒಂದು ವೇಳೆ ಆರಂಭಿಕ ಟ್ರೆಂಡ್ ಹೀಗೆಯೇ ಮುಂದುವರಿದರೆ, ಆ ಸಂಪ್ರದಾಯವನ್ನೇ ಮುರಿಯುವ ಅವಕಾಶ ಟಿಎಂಕೆಗೆ ಸಿಗಬಹುದಾಗಿದೆ.
ಮತದಾನೋತ್ತರ ಸಮೀಕ್ಷೆ ಪ್ರಕಟಿಸಿದ್ದ ಹಲವು ಸಂಸ್ಥೆಗಳು, ಈ ಬಾರಿಯೂ ಡಿಎಂಕೆ ಅಧಿಕಾರಕ್ಕೇರಲಿದೆ ಎಂದೇ ಭವಿಷ್ಯ ನುಡಿದಿದ್ದವು. ಆಯಕ್ಸಿಸ್ ಮೈ ಇಂಡಿಯಾ ಮಾತ್ರವೇ, ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಅಂದಾಜಿಸಿತ್ತು.
2024ರಲ್ಲಿ ಸ್ಥಾಪನೆಯಾದ ಪಕ್ಷ
ವೃತ್ತಿಜೀವನದ ಔನ್ನತ್ಯವನ್ನೇ ತ್ಯಜಿಸಿ ರಾಜಕೀಯಕ್ಕೆ ಬರುವುದಾಗಿ 2024ರ ಫೆಬ್ರುವರಿಯಲ್ಲಿ ಘೋಷಿಸಿದ್ದ ವಿಜಯ್, ಅದೇ ವರ್ಷ ಆಗಸ್ಟ್ನಲ್ಲಿ ಪಕ್ಷದ ಹೆಸರು, ಧ್ವಜ ಪ್ರಕಟಿಸಿದ್ದರು. ಚುನಾವಣಾ ಆಯೋಗದಿಂದ 'ವಿಸಿಲ್' ಚಿಹ್ನೆಯನ್ನು ಟಿವಿಕೆಗೆ ನಿಗದಿ ಮಾಡಿದೆ.

