ಗುವಾಹಟಿ: ಚಹಾ ತೋಟಗಳ ನಾಡು ಎಂದೇ ಕರೆಸಿಕೊಳ್ಳುವ ಅಸ್ಸಾಂನಲ್ಲಿ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಏರುವ ತವಕದಲ್ಲಿದೆ.
ಇನ್ನೊಂದೆಡೆ 10 ವರ್ಷಗಳ ಜಯದ ಬರ ನೀಗಿಸುವ ತವಕದಲ್ಲಿ ಕಾಂಗ್ರೆಸ್ ಪಕ್ಷವಿದೆ.
ಅಸ್ಸಾಂನ 126 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, 722 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಈ ಬಾರಿ 2.50 ಕೋಟಿಗೂ ಅಧಿಕ ಮತದಾರರು ಹಕ್ಕು ಚಲಾಯಿಸಿದ್ದು, ಶೇ 85.96ರಷ್ಟು ದಾಖಲೆ ಮತದಾನವಾಗಿದೆ.
ಬಿಜೆಪಿ ನಾಯಕ ಹಾಗೂ ಹಾಲಿ ಸಿಎಂ ಹಿಮಂತ ಬಿಸ್ವಾ ಶರ್ಮಾ ಜಲುಕ್ಬರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, 3ನೇ ಬಾರಿಗೆ ಮುಖ್ಯಮಂತ್ರಿ ಆಗುವ ಇರಾದೆಯಲ್ಲಿದ್ದಾರೆ.
ಇತ್ತ ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೌರವ್ ಗೋಗಯ್ ಜೋರ್ಹತ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ಮೊದಲ ಬಾರಿ ಸಿಎಂ ಆಗುವ ಹಂಬಲದಲ್ಲಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಈ ಬಾರಿಯೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
ಚುನಾವಣೆಗೂ ಮುನ್ನ ಕಾಂಗ್ರೆಸ್‌ನ ಹಿರಿಯ ನಾಯಕ ಪ್ರದ್ಯುತ್ ಬೊರ್ಡೊಲೊಯ್ ಮತ್ತು ಭೂಪೇನ್ ಬೋರಾಹ್ ಬಿಜೆಪಿಗೆ ಸೇರಿದ್ದರು. ದಿಸ್ಪುರ್ ಕ್ಷೇತ್ರದಿಂದ ಪ್ರದ್ಯುತ್ ಹಾಗೂ ಬಿಹ್ಪುರಿಯಾ ಕ್ಷೇತ್ರದಿಂದ ಭೂಪೇನ್ ಸ್ಪರ್ಧಿಸಿದ್ದಾರೆ.
ಸದ್ಯದ ಟ್ರೆಂಡ್ ಹೇಗಿದೆ?
ಮತ ಎಣಿಕೆಯಲ್ಲಿ ಚುನಾವಣಾ ಆಯೋಗದ ಪ್ರಕಾರ, ಅಸ್ಸಾಂನಲ್ಲಿ ಆಡಳಿತಾರೂಢ ಎನ್‌ಡಿಎ 87 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 21 ಕ್ಷೇತ್ರಗಳಲ್ಲಿ ಮುಂದಿದೆ.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜಲುಕ್ಬರಿ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದರೆ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಜೋರ್ಹತ್‌ನಲ್ಲಿ ತಮ್ಮ ಬಿಜೆಪಿ ಪ್ರತಿಸ್ಪರ್ಧಿ ಹಿತೇಂದ್ರನಾಥ್ ಗೋಸ್ವಾಮಿಗಿಂತ ಹಿಂದುಳಿದಿದ್ದಾರೆ.
ಗೌರವ್ ಗೊಗೊಯ್ ತಮ್ಮ ಬಿಜೆಪಿ ಪ್ರತಿಸ್ಪರ್ಧಿ ಹಿತೇಂದ್ರನಾಥ್ ಗೋಸ್ವಾಮಿಗಿಂತ 4,132 ಮತಗಳಿಂದ ಹಿಂದುಳಿದಿದ್ದಾರೆ.
ಗೊಗೊಯ್ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಚೊಚ್ಚಲ ಪ್ರವೇಶ ಮಾಡುತ್ತಿದ್ದರೆ, ಐದು ಬಾರಿ ಶಾಸಕರಾಗಿರುವ, ಮೂರು ಬಾರಿ ಎಜಿಪಿ ನಾಯಕರಾಗಿ ಮತ್ತು ಎರಡು ಬಾರಿ ಬಿಜೆಪಿ ಶಾಸಕರಾಗಿ ಕ್ಷೇತ್ರವನ್ನು ಪ್ರತಿನಿಧಿಸಿರುವ ಗೋಸ್ವಾಮಿ ಸತತ ಮೂರನೇ ಅವಧಿಗೆ ಸ್ಪರ್ಧಿಸಿದ್ದಾರೆ.

