HEALTH TIPS

BRICS ಅಜೆಂಡಾದಲ್ಲಿ ಡಾಲರ್ ಇಲ್ಲ: ಕೊಲ್ಲಿ ಬಿಕ್ಕಟ್ಟು, ಇಂಧನ ಭದ್ರತೆ ಬಗ್ಗೆ ಸಭೆ

 ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರುಗಳ ಮಾತುಕತೆಯಲ್ಲಿ ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡುವ ಅಜೆಂಡಾ ಪರಿಗಣನೆಯಲ್ಲಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.


ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟಿನಿಂದಾಗಿ ಜಾಗತಿಕ ಇಂಧನ ಪೂರೈಕೆ ಸರಪಳಿಗೆ ಅಡಚಣೆಯಾಗಿದೆ. ಹಾಗಾಗಿ ಭಾರತದಲ್ಲಿ ನಡೆಯಲಿರುವ ಎರಡು ದಿನಗಳ ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಈ ವಿಷಯವು ಚರ್ಚೆಯಾಗುವ ನಿರೀಕ್ಷೆಯಿದೆ.

ಚರ್ಚೆಯಾಗಲಿರುವ ಪ್ರಮುಖ ವಿಷಯಗಳು:

ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಾರ್ಷಿಕ ಶೃಂಗಸಭೆಗೂ ಮುನ್ನ ವಿದೇಶಾಂಗ ಸಚಿವರುಗಳ ಸಮಾವೇಶವನ್ನು ಆಯೋಜಿಸುತ್ತಿದೆ. ಸಭೆಯ ಅಧ್ಯಕ್ಷತೆಯನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ವಹಿಸುತ್ತಿದ್ದಾರೆ.

ಎರಡು ದಿನಗಳ ಸಮಾವೇಶದಲ್ಲಿ ಪ್ರಮುಖವಾಗಿಯೂ ಪಶ್ಚಿಮ ಏಷ್ಯಾ ಬಿಕ್ಕಟ್ಟು ಹಾಗೂ ಇಂಧನ ಭದ್ರತೆ ಕುರಿತು ಮಾತುಕತೆಗಳು ನಡೆಯಲಿವೆ. ಆದರೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವೆ ಸಮನ್ವಯ ಸಾಧಿಸುವ ಮಹತ್ತರವಾದ ಜವಾಬ್ದಾರಿಯನ್ನು ಅಧ್ಯಕ್ಷತೆ ವಹಿಸುತ್ತಿರುವ ಭಾರತ ಹೊಂದಿದೆ.

ಕಳೆದ ತಿಂಗಳಲ್ಲಿ ಅಮೆರಿಕ-ಇಸ್ರೇಲ್ ಯುದ್ಧದ ಕುರಿತಾಗಿ ಸದಸ್ಯ ರಾಷ್ಟ್ರಗಳ ನಡುವೆ ಉಂಟಾದ ಭಿನ್ನಾಭಿಪ್ರಾಯಗಳು, ಒಮ್ಮತ ಮೂಡಿಸುವ ಭಾರತದ ಪ್ರಯತ್ನಗಳಿಗೆ ಹಿನ್ನಡೆಯನ್ನುಂಟು ಮಾಡಿತ್ತು.

ಈ ಸಲ ಪರಸ್ಪರ ಹಿತಾಸಕ್ತಿಯ ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ವಿದೇಶಾಂಗ ಸಚಿವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವ ಸಾಧ್ಯತೆ ಇದೆ. ಸ್ಥಿರತೆ, ನಾವೀನ್ಯತೆ, ಸುಸ್ಥಿರತೆ ಸಹ ಪ್ರಮುಖ ಕಾರ್ಯಸೂಚಿಯಾಗಿರಲಿವೆ.

ಇರಾನ್, ರಷ್ಯಾ ವಿದೇಶಾಂಗ ಸಚಿವರು ಭಾಗಿ...

ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಸಹ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಈಗಾಗಲೇ ಪಶ್ಚಿಮ ಏಷ್ಯಾ ಬಿಕ್ಕಟ್ಟು ಇತ್ಯರ್ಥಕ್ಕೆ ಭಾರತವು ರಾಜತಾಂತ್ರಿಕವಾಗಿ ಪ್ರಯತ್ನಿಸಿದರೆ ಸ್ವಾಗತಿಸುವುದಾಗಿಯೂ ಇರಾನ್ ಪ್ರತಿನಿಧಿಗಳು ತಿಳಿಸಿದ್ದಾರೆ.

ಆದರೆ ಅಮೆಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೂರು ದಿನಗಳ ಭೇಟಿಯ ಹಿನ್ನೆಲೆಯಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಗೈರು ಹಾಜರಾಗಲಿದ್ದಾರೆ. ಆದರೆ ವಾಂಗ್ ಪರವಾಗಿ ಚೀನಾದ ರಾಯಭಾರಿ ಷಿ ಫೀಹಾಂಗ್ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸಮಾವೇಶದ ಮೊದಲ ದಿನದಂದು ಬ್ರಿಕ್ಸ್ ವಿದೇಶಾಂಗ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಸೇರಿದಂತೆ ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಹಾಗಾಗಿ ಈ ಸಭೆಯಲ್ಲಿ ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಒಮ್ಮತದ ಪ್ರಕಟಣೆ ಹೊರಬರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಬ್ರಿಕ್ಸ್ ರಾಷ್ಟ್ರಗಳ ನಡುವೆ ಭಿನ್ನಮತ...

ಸಂಯುಕ್ತ ಅರಬ್ ಸಂಸ್ಥಾನ (ಯುಎಇ) ಮತ್ತು ಇರಾನ್ ನಡುವಿನ ಭಿಕ್ಕಟ್ಟಿನಿಂದಾಗಿ ಒಮ್ಮತದ ಪ್ರಕಟಣೆ ಬಂದಿರಲಿಲ್ಲ. ಯುಎಇಯಲ್ಲಿ ಅಮೆರಿಕದ ನೆಲೆ ಹಾಗೂ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸಿದ್ದವು. ಇದರಿಂದಾಗಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ಹಾಗಾಗಿ ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಇಂಧನ ಪೂರೈಕೆಯ ಮೇಲಿನ ಅದರ ಪರಿಣಾಮವು ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪಶ್ಚಿಮ ಏಷ್ಯಾ ಸಂಘರ್ಷ ಉಲ್ಬಣಗೊಂಡ ನಂತರ, ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ನಡುವಣ ಯುದ್ಧ ನಿಲ್ಲಿಸಲು ಬ್ರಿಕ್ಸ್ ಅಧ್ಯಕ್ಷತೆ ವಹಿಸಿರುವ ಭಾರತವು 'ಸ್ವತಂತ್ರ ಪಾತ್ರ' ನಿಭಾಯಿಸುವಂತೆ ಇರಾನ್ ಒತ್ತಾಯಿಸಿತ್ತು.

ಪರ್ಷಿಯನ್ ಕೊಹ್ಲಿ ಮತ್ತು ಒಮಾನ್ ಕೊಲ್ಲಿ ನಡುವಣ ಕಿರಿದಾದ ಹಡುಗು ಸಾರಿಗೆ ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದ್ದರಿಂದ ಜಾಗತಿಕ ತೈಲ ಸಾಗಣೆಗೆ ಅಡ್ಡಿಯಾಗಿದೆ. ಇದರಿಂದಾಗಿ ಜಾಗತಿಕವಾಗಿ ಇಂಧನ ಬೆಲೆಗಳು ಗಗನಕ್ಕೇರಿವೆ.

ರೂಪಾಯಿಗೆ ಆದ್ಯತೆ...

ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಭಾರತೀಯ ರೂಪಾಯಿಯ ಬಳಕೆಯನ್ನು ಉತ್ತೇಜಿಸುವುದು ಮತ್ತು ಗಡಿಯಾಚೆಗಿನ ವಹಿವಾಟುಗಳಿಗೆ ಸ್ಥಳೀಯ ಕರೆನ್ಸಿಗಳನ್ನು ಬಳಸುವುದರ ಮೇಲೆ ಭಾರತ ಗಮನ ಹರಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಡಾಲರ್ ಅನ್ನು ವ್ಯವಸ್ಥಿತವಾಗಿ ಗುರಿಯಾಗಿಸುವುದು ಅಥವಾ ಅದನ್ನು ಬದಲಿಸುವುದು ಭಾರತದ ಗುರಿಯಲ್ಲ. ಬದಲಿಗೆ, ವಹಿವಾಟು ವೆಚ್ಚವನ್ನು ಕಡಿಮೆ ಮಾಡಲು ಮತ್ತು ವ್ಯಾಪಾರವನ್ನು ಸುಲಭಗೊಳಿಸಲು ಸ್ಥಳೀಯ ಕರೆನ್ಸಿಗಳ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸುವುದು ಭಾರತದ ಆದ್ಯತೆಯಾಗಿದೆ.

ಬ್ರಿಕ್ಸ್ ರಾಷ್ಟ್ರಗಳು ಡಾಲರ್ ಪ್ರಾಬಲ್ಯವನ್ನು ಕಡಿಮೆ ಮಾಡಲು ಪ್ರಯತ್ನಿಸಿದರೆ ಶೇ 100ರಷ್ಟು ಸುಂಕ ಹೇರುವುದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಭಾರತದ ಈ ಸ್ಪಷ್ಟನೆ ಮಹತ್ವ ಪಡೆದುಕೊಂಡಿದೆ.


ಒಟ್ಟಾರೆಯಾಗಿ ಭಾರತವು ಬ್ರಿಕ್ಸ್ ವೇದಿಕೆಯನ್ನು ಅಮೆರಿಕ ಅಥವಾ ಡಾಲರ್ ವಿರೋಧಿ ವೇದಿಕೆಯನ್ನಾಗಿ ಬಳಸಲು ಬಯಸುವುದಿಲ್ಲ. ತನ್ನದೇ ಆದ ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಮತ್ತು ರೂಪಾಯಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಲಪಡಿಸಲು ಯತ್ನಿಸುತ್ತಿದೆ.

ಬ್ರಿಕ್ಸ್ ಪ್ರಭಾವ...

ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ದೇಶಗಳನ್ನು ಒಳಗೊಂಡಿದ್ದ ಬ್ರಿಕ್ಸ್‌ 2024ರಲ್ಲಿ ವಿಸ್ತರಿಸಲಾಯಿತು. ಈಜಿಪ್ಟ್, ಇಥಿಯೋಪಿಯಾ, ಇರಾನ್ ಮತ್ತು ಯುಎಇ ಸೇರ್ಪಡೆಗೊಂಡಿತ್ತು. 2025ರಲ್ಲಿ ಇಂಡೋನೇಷ್ಯಾ ಸಹ ಸದಸ್ಯ ರಾಷ್ಟ್ರವಾಯಿತು.

ಇಂದು ವಿಶ್ವದ 11 ಪ್ರಮುಖ ಬೆಳೆದು ಬರುತ್ತಿರುವ ಆರ್ಥಿಕತೆಗಳನ್ನು ಒಟ್ಟಗೂಡಿಸುವ ಮೂಲಕ ಪ್ರಭಾವಶಾಲಿ ಗುಂಪಾಗಿ ಹೊರಹೊಮ್ಮಿದೆ. ಇದು ಜಾಗತಿಕ ಜನಸಂಖ್ಯೆ ಸುಮಾರು ಶೇ 49.5, ಜಾಗತಿಕ ಜಿಡಿಪಿಯ ಸುಮಾರು ಶೇ 40, ಜಾಗತಿಕ ವ್ಯಾಪಾರದ ಸುಮಾರು ಶೇ 26ರಷ್ಟನ್ನು ಪ್ರತಿನಿಧಿಸುತ್ತದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries