ನವದೆಹಲಿ: 2026-27ರ ಶೈಕ್ಷಣಿಕ ವರ್ಷ ಪ್ರಾರಂಭವಾದ ಎರಡು ತಿಂಗಳ ಬಳಿಕ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಜುಲೈ 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ತ್ರಿಭಾಷಾ ಅಧ್ಯಯನವನ್ನು ಕಡ್ಡಾಯಗೊಳಿಸಿದೆ.
ಕನಿಷ್ಠ ಎರಡು ಸ್ಥಳೀಯ ಭಾರತೀಯ ಭಾಷೆಗಳು ಸೇರಿ ಮೂರು ಭಾಷೆಗಳ ಕಲಿಕೆ ಕಡ್ಡಾಯಗೊಳಿಸಲಾಗಿದೆ.
'ರಾಷ್ಟ್ರೀಯ ಶಿಕ್ಷಣ ನೀತಿ -2020 (ಎನ್‌ಇಪಿ) ಮತ್ತು ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು -2023 (ಎನ್‌ಸಿಎಫ್-ಎಸ್‌ಇ)' ಯೋಜನೆಯ ಭಾಗವಾಗಿ ಸಿಬಿಎಸ್‌ಇ ಈ ಪರಿಷ್ಕರಣೆ ಮಾಡಿದೆ.
ಎರಡು ಸ್ಥಳೀಯ ಭಾರತೀಯ ಭಾಷೆಗಳನ್ನು ಅಧ್ಯಯನ ಮಾಡಿದ ನಂತರವೇ ವಿದ್ಯಾರ್ಥಿಗಳಿಗೆ ಮೂರನೆಯ ಭಾಷೆಯಾಗಿ ಅಥವಾ ನಾಲ್ಕನೆಯ ಹೆಚ್ಚುವರಿ ಭಾಷೆಯಾಗಿ ವಿದೇಶಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ ಎಂದು ಸಿಬಿಎಸ್‌ಇ ಪ್ರಕಟಣೆ ತಿಳಿಸಿದೆ. ಹಾಗಾದರೆ, ತ್ರಿಭಾಷಾ ಸೂತ್ರದ ಮತ್ತಷ್ಟು ಮಾಹಿತಿ ತಿಳಿಯೋಣ.
ತ್ರಿಭಾಷಾ ಸೂತ್ರ ಎಂದರೇನು?
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರಲ್ಲಿನ ತ್ರಿಭಾಷಾ ಸೂತ್ರವು ವಿದ್ಯಾರ್ಥಿಗಳು ಕಡ್ಡಾಯವಾಗಿ ಮೂರು ಭಾಷೆಗಳನ್ನು ಕಲಿಯಬೇಕೆಂದು ಶಿಫಾರಸು ಮಾಡುತ್ತದೆ. ಇವುಗಳಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತದ ಸ್ಥಳೀಯ ಭಾಷೆಗಳಾಗಿರಬೇಕು. ಈ ಸೂತ್ರವು ಸರ್ಕಾರಿ ಮತ್ತು ಖಾಸಗಿ ಶಾಲೆಗಳೆರಡಕ್ಕೂ ಅನ್ವಯಿಸುತ್ತದೆ. ಯಾವುದೇ ಭಾಷೆಯನ್ನು ಬಲವಂತವಾಗಿ ಹೇರದೆ, ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಇದು ರಾಜ್ಯಗಳಿಗೆ ನೀಡುತ್ತದೆ.
ತ್ರಿಭಾಷಾ ಸೂತ್ರದ ಇತಿಹಾಸವೇನು?
ಶಿಕ್ಷಣ ಆಯೋಗವು 1964-66ರಲ್ಲಿ ಮೊದಲಿಗೆ ತ್ರಿಭಾಷಾ ಸೂತ್ರವನ್ನು ಪ್ರಸ್ತಾಪಿಸಿತ್ತು. ಇದನ್ನು ಅಧಿಕೃತವಾಗಿ 'ಕೊಠಾರಿ ಆಯೋಗ' ಎಂದು ಕರೆಯಲಾಗುತ್ತದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ನೇತೃತ್ವದಲ್ಲಿ 1968ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇದನ್ನು ಅಧಿಕೃತವಾಗಿ ಅಳವಡಿಸಿಕೊಳ್ಳಲಾಗಿತ್ತು. ಭಾಷಾ ವೈವಿಧ್ಯತೆ ಮತ್ತು ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸುವ ಸಲುವಾಗಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಸರ್ಕಾರವು 1986ರ ಶಿಕ್ಷಣ ನೀತಿಯಲ್ಲಿ ಇದನ್ನು ಪುನರುಚ್ಚರಿಸಿತ್ತು. 1992ರಲ್ಲಿ ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಇದನ್ನು ಪರಿಷ್ಕರಿಸಿತ್ತು.
ಈ ಸೂತ್ರವು ಮೂರು ಭಾಷೆಗಳನ್ನು ಒಳಗೊಂಡಿತ್ತು. ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆ, ಅಧಿಕೃತ ಭಾಷೆ ಮತ್ತು ಒಂದು ಆಧುನಿಕ ಭಾರತೀಯ ಅಥವಾ ಯುರೋಪಿಯನ್ ಭಾಷೆ.
ರಾಷ್ಟ್ರೀಯ ಶಿಕ್ಷಣ ನೀತಿ-2020 ಏನು ಹೇಳುತ್ತದೆ?
ಬಹುಭಾಷಾ ಸಂಸ್ಕೃತಿಯನ್ನು ಉತ್ತೇಜಿಸಲು ಶಾಲಾ ಮಟ್ಟದಿಂದಲೇ 'ತ್ರಿಭಾಷಾ ಸೂತ್ರ'ವನ್ನು ಶೀಘ್ರವೇ ಜಾರಿಗೆ ತರಲು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಪ್ರಸ್ತಾಪಿಸುತ್ತದೆ. ಸಾಂವಿಧಾನಿಕ ನಿಬಂಧನೆ, ಜನರ ಆಕಾಂಕ್ಷೆ, ಪ್ರಾಂತ್ಯ ಮತ್ತು ಒಕ್ಕೂಟದ ಅಗತ್ಯತೆ ಗಮನದಲ್ಲಿಟ್ಟುಕೊಂಡು ಬಹುಭಾಷಾ ಸಂಸ್ಕೃತಿ ಹಾಗೂ ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಲು ತ್ರಿಭಾಷಾ ಸೂತ್ರವನ್ನು ಜಾರಿಗೊಳಿಸಲಾಗುತ್ತದೆ ಎಂದು ಎನ್‌ಇಪಿ ದಾಖಲೆಯಲ್ಲಿ ತಿಳಿಸಲಾಗಿದೆ.
ಆದಾಗ್ಯೂ, ತ್ರಿಭಾಷಾ ಸೂತ್ರದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಇರಲಿದ್ದು, ಯಾವುದೇ ರಾಜ್ಯದ ಮೇಲೆ ಯಾವುದೇ ಭಾಷೆಯನ್ನು ಹೇರುವುದಿಲ್ಲ ಎಂದೂ ಎನ್‌ಇಪಿ ಹೇಳಿದೆ. ಮಕ್ಕಳು ಕಲಿಯುವ ಮೂರು ಭಾಷೆಗಳು ರಾಜ್ಯ, ಪ್ರಾಂತ್ಯ ಮತ್ತು ಸ್ವತಃ ವಿದ್ಯಾರ್ಥಿಗಳ ಆಯ್ಕೆಯಾಗಿರುತ್ತದೆ. ಆದರೆ, ಈ ಮೂರರಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತದ ಸ್ಥಳೀಯ ಭಾಷೆಗಳಾಗಿರಬೇಕು ಎಂಬುದು ನಿಯಮ.
ವಿದೇಶಿ ಭಾಷೆಗಳ ವಿಷಯವೇನು?
ರಾಷ್ಟ್ರೀಯ ಶಿಕ್ಷಣ ನೀತಿ-2020ರ ಪ್ರಕಾರ ಭಾರತೀಯ ಭಾಷೆಗಳು, ಇಂಗ್ಲಿಷ್ ಜೊತೆಗೆ, ಪ್ರೌಢ ಶಾಲಾ ಮಟ್ಟದ ವಿದ್ಯಾರ್ಥಿಗಳು ಕೊರಿಯನ್, ಜಪಾನೀಸ್, ಫ್ರೆಂಚ್, ಜರ್ಮನ್ ಮತ್ತು ಸ್ಪ್ಯಾನಿಷ್ ಸೇರಿದಂತೆ ಇತರ ವಿದೇಶಿ ಭಾಷೆಗಳನ್ನು ಸಹ ಕಲಿಯಬಹುದು. ಆದರೆ, ಪಠ್ಯಕ್ರಮದಲ್ಲಿನ ಪ್ರಮುಖ ಬದಲಾವಣೆಯೆಂದರೆ ಇಂಗ್ಲಿಷ್ ಅನ್ನು ವಿದೇಶಿ ಭಾಷೆ ಎಂದು ವರ್ಗೀಕರಿಸಲಾಗಿದೆ.
ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು ತ್ರಿಭಾಷಾ ಸೂತ್ರದೊಳಗೆ ಕೇವಲ ಒಂದು ವಿದೇಶಿ ಭಾಷೆಗೆ ಮಾತ್ರ ಅವಕಾಶ ನೀಡುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ಎರಡನೇ ಮತ್ತು ಮೂರನೇ ಭಾಷೆಗಳಾಗಿ ಇಂಗ್ಲಿಷ್ ಮತ್ತು ಮತ್ತೊಂದು ವಿದೇಶಿ ಭಾಷೆ ಎರಡನ್ನೂ ಒಟ್ಟಿಗೆ ಆಯ್ಕೆ ಮಾಡಿಕೊಳ್ಳುವುದನ್ನು ಇದು ನಿರ್ಬಂಧಿಸಬಹುದು.
ಪುಸ್ತಕಗಳು ಸಿದ್ಧವಾಗಿವೆಯೇ?
ಪಠ್ಯಪುಸ್ತಕಗಳು ಲಭ್ಯವಾಗುವವರೆಗೆ 9ನೇ ತರಗತಿಯ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿದ ಭಾಷೆಯ 6ನೇ ತರಗತಿಯ ಆರ್3 ಪಠ್ಯಪುಸ್ತಕಗಳನ್ನು (2026-27ರ ಆವೃತ್ತಿ) ಬಳಸಬೇಕು ಎಂದು ಮಂಡಳಿಯು ತಿಳಿಸಿದೆ.
ಶಿಕ್ಷಕರ ಕೊರತೆ ಎದುರಿಸುತ್ತಿರುವ ಶಾಲೆಗಳು, ತಾತ್ಕಾಲಿಕವಾಗಿ ಸಂಬಂಧಿತ ಭಾಷೆಯಲ್ಲಿ ಕಾರ್ಯನಿರ್ವಹಣಾ ಪ್ರಾವೀಣ್ಯತೆ (ಮಾತನಾಡುವ / ಬರೆಯುವ ಕೌಶಲ್ಯ) ಹೊಂದಿರುವ ಇತರ ವಿಷಯಗಳ ಶಿಕ್ಷಕರನ್ನು ಬಳಸಿಕೊಳ್ಳಬಹುದು ಎಂದೂ ಮಂಡಳಿಯು ಹೇಳಿದೆ.
ಏನಿದು ತ್ರಿಭಾಷಾ ಸೂತ್ರ ವಿವಾದ?
ತ್ರಿಭಾಷಾ ಸೂತ್ರವು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ರಾಜಕೀಯ ಸಂಘರ್ಷದ ಕೇಂದ್ರಬಿಂದುವಾಗಿತ್ತು.
ತಮಿಳುನಾಡು ಐತಿಹಾಸಿಕವಾಗಿ ತ್ರಿಭಾಷಾ ಸೂತ್ರವನ್ನು ವಿರೋಧಿಸುತ್ತಾ ಬಂದಿದೆ. 1937ರಲ್ಲಿ ಸಿ. ರಾಜಗೋಪಾಲಾಚಾರಿ ನೇತೃತ್ವದ ಅಂದಿನ ಮದ್ರಾಸ್ ಸರ್ಕಾರವು ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸಿತ್ತು. ಈ ಕ್ರಮವು ಜಸ್ಟಿಸ್ ಪಾರ್ಟಿ ಮತ್ತು ಪೆರಿಯಾರ್ ಅವರಂತಹ ದ್ರಾವಿಡ ನಾಯಕರಿಂದ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಈ ನೀತಿಯನ್ನು 1940ರಲ್ಲಿ ಹಿಂಪಡೆಯಲಾಯಿತಾದರೂ, ಹಿಂದಿ ವಿರೋಧಿ ಭಾವನೆ ಮುಂದುವರಿಯಿತು.
1968ರಲ್ಲಿ ತ್ರಿಭಾಷಾ ಸೂತ್ರವನ್ನು ಪರಿಚಯಿಸಿದಾಗಲೂ ತಮಿಳುನಾಡು ಇದನ್ನು ಹಿಂದಿ ಹೇರಿಕೆಯ ಪ್ರಯತ್ನ ಎಂದು ಪರಿಗಣಿಸಿ ವಿರೋಧಿಸಿತ್ತು. ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರ ನೇತೃತ್ವದಲ್ಲಿ ರಾಜ್ಯವು ದ್ವಿಭಾಷಾ ನೀತಿಯನ್ನು ಅಳವಡಿಸಿಕೊಂಡಿತ್ತು. ಕೇವಲ ತಮಿಳು ಮತ್ತು ಇಂಗ್ಲಿಷ್ ಅನ್ನು ಮಾತ್ರ ಬೋಧಿಸಲು ನಿರ್ಧರಿಸಿತ್ತು.
ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳು ಸೇರಿದಂತೆ ಭಾರತೀಯ ಭಾಷೆಗಳಿಗಿಂತ ಇಂಗ್ಲಿಷ್ ಅನ್ನು ಆಯ್ದುಕೊಂಡಿರುವ ತಮಿಳುನಾಡು, ತ್ರಿಭಾಷಾ ಸೂತ್ರವನ್ನು ಜಾರಿಗೊಳಿಸದ ದೇಶದ ಏಕೈಕ ರಾಜ್ಯವಾಗಿ ಉಳಿದಿದೆ.

