HEALTH TIPS

ಪಶ್ಚಿಮ ಏಶ್ಯ ಬಿಕ್ಕಟ್ಟು | ರಸಗೊಬ್ಬರ ಸಬ್ಸಿಡಿ ವೆಚ್ಚ 2.41 ಲಕ್ಷ ಕೋಟಿ ರೂ.ವರೆಗೆ ಏರಿಕೆ ಸಾಧ್ಯತೆ

 ನವದೆಹಲಿ: ಪಶ್ಚಿಮ ಏಶ್ಯ ಬಿಕ್ಕಟ್ಟು ಮುಂದುವರಿದಿರುವ ಹಿನ್ನೆಲೆಯಲ್ಲಿ ಯೂರಿಯಾ ಸೇರಿದಂತೆ ವಿವಿಧ ರಸಗೊಬ್ಬರಗಳ ಆಮದು ವೆಚ್ಚ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆಯಿಂದಾಗಿ, 2026-27ನೇ ಹಣಕಾಸು ವರ್ಷದಲ್ಲಿ ರಸಗೊಬ್ಬರ ಸಬ್ಸಿಡಿಗಾಗಿ ಕೇಂದ್ರ ಸರ್ಕಾರದ ವೆಚ್ಚವು 70,000 ಕೋಟಿ ರೂ.ವಿನಿಂದ 2.41 ಲಕ್ಷ ಕೋಟಿ ರೂ.ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು deccanherald.com ವರದಿ ಮಾಡಿದೆ.

ಆದರೆ, ರಸಗೊಬ್ಬರ ಸಬ್ಸಿಡಿಗಾಗಿ ಕೇಂದ್ರ ಬಜೆಟ್‌ನಲ್ಲಿ 1.71 ಲಕ್ಷ ಕೋಟಿ ರೂ. ಮಾತ್ರ ಮೀಸಲಿರಿಸಲಾಗಿದೆ.

ರಸಗೊಬ್ಬರ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅಪರ್ಣಾ ಎಸ್. ಶರ್ಮ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, "ಸಬ್ಸಿಡಿ ವೆಚ್ಚ ಹೆಚ್ಚಾಗಲಿದೆ. ಆದರೆ, ಅದು ಎಷ್ಟು ಪ್ರಮಾಣದಲ್ಲಿ ಹೆಚ್ಚಾಗಲಿದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ.

"ಒಂದು ವೇಳೆ 70,000 ಕೋಟಿ ರೂ. ಹೆಚ್ಚಾಗುವ ಸಾಧ್ಯತೆಯಿದೆಯೇ?" ಎಂಬ ಪ್ರಶ್ನೆಗೆ, "ಆಗಬಹುದು" ಎಂದು ಅವರು ಉತ್ತರಿಸಿದ್ದಾರೆ.

"ವೆಚ್ಚದ ಒತ್ತಡ ಇದ್ದರೂ, 2026ರ ಖಾರಿಫ್ ಋತುವಿಗೆ ಅಗತ್ಯವಿರುವಷ್ಟು ರಸಗೊಬ್ಬರ ಲಭ್ಯವಿದೆ" ಎಂದು ಅವರು ಭರವಸೆ ನೀಡಿದ್ದಾರೆ.

ಖಾರಿಫ್ ಋತುವಿಗೆ ಒಟ್ಟು 390 ಲಕ್ಷ ಟನ್ ರಸಗೊಬ್ಬರ ಅಗತ್ಯವಿದ್ದು, ಸದ್ಯ 200.9 ಲಕ್ಷ ಟನ್ ಸಂಗ್ರಹ ಲಭ್ಯವಿದೆ. ಇದು ಒಟ್ಟಾರೆ ಅಗತ್ಯದ ಶೇ. 51ರಷ್ಟಾಗಿದೆ. ಉಳಿದ ಕೊರತೆಯನ್ನು ವಿವಿಧ ಆಮದು ಮೂಲಗಳ ಮೂಲಕ ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ದೇಶೀಯವಾಗಿ ಪ್ರತಿದಿನ ಅಂದಾಜು 80,000 ಟನ್ ರಸಗೊಬ್ಬರ ಉತ್ಪಾದನೆಯಾಗುತ್ತಿದೆ. ಪಶ್ಚಿಮ ಏಶ್ಯ ಬಿಕ್ಕಟ್ಟು ಆರಂಭವಾದ ಬಳಿಕ ಇದುವರೆಗೆ 86.2 ಲಕ್ಷ ಟನ್ ರಸಗೊಬ್ಬರ ಉತ್ಪಾದನೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 93 ಲಕ್ಷ ಟನ್ ಉತ್ಪಾದನೆಯಾಗಿದ್ದಕ್ಕೆ ಹೋಲಿಸಿದರೆ, ಇದು ಸ್ವಲ್ಪ ಕಡಿಮೆಯಾಗಿದೆ.

"ಸ್ವಲ್ಪ ಪ್ರಮಾಣದ ಕೊರತೆ ಇದೆ. ಅದನ್ನು ಮುಂದಿನ ತಿಂಗಳುಗಳಲ್ಲಿ ಭರ್ತಿ ಮಾಡಿಕೊಳ್ಳುವ ವಿಶ್ವಾಸವಿದೆ" ಎಂದು ಅಪರ್ಣಾ ಶರ್ಮ ಹೇಳಿದ್ದಾರೆ.

ಯೂರಿಯಾ ಘಟಕಗಳಿಗೆ ಅಗತ್ಯವಾದ ಅನಿಲದ ಸರಬರಾಜು ಸಮರ್ಪಕವಾಗಿದೆ. ಹಾರ್ಮುಝ್ ಜಲಸಂಧಿಯ ಮೇಲಿನ ಅವಲಂಬನೆಯನ್ನು ತಪ್ಪಿಸಲು ಭಾರತ ತನ್ನ ಆಮದು ಮಾರ್ಗಗಳನ್ನು ಸಕ್ರಿಯವಾಗಿ ವೈವಿಧ್ಯಮಯಗೊಳಿಸುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

ಈಗಾಗಲೇ ಪರ್ಯಾಯ ಮಾರ್ಗಗಳ ಮೂಲಕ ಸುಮಾರು 22 ಲಕ್ಷ ಟನ್‌ಗಿಂತ ಹೆಚ್ಚು ರಸಗೊಬ್ಬರ ಭಾರತೀಯ ಸಮುದ್ರ ತೀರಗಳಿಗೆ ತಲುಪಿದೆ. ಕ್ರೋಡೀಕೃತ ಖರೀದಿ ಕಾರ್ಯತಂತ್ರದಡಿ ಕೇಂದ್ರ ಸರ್ಕಾರ 13.5 ಲಕ್ಷ ಟನ್ ಡಿ-ಅಮೋನಿಯಮ್ ಫಾಸ್ಫೇಟ್ (ಡಿಎಪಿ), 7 ಲಕ್ಷ ಟನ್ ಎನ್‌ಪಿಕೆ ಮಿಶ್ರಣಗಳು ಹಾಗೂ ಅಮೋನಿಯಂ ಸಲ್ಫೇಟ್, ಫಾಸ್ಫೇಟ್ ಸೇರಿದಂತೆ ಇತರೆ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿದೆ.

ಯೂರಿಯಾ ಹಾಗೂ ಸಮ್ಮಿಶ್ರ ರಸಗೊಬ್ಬರ ಉತ್ಪಾದನೆಗೆ ಅಗತ್ಯವಿರುವ ಇತರೆ ಸಾಮಗ್ರಿಗಳ ಲಭ್ಯತೆ ಕುರಿತೂ ರಸಗೊಬ್ಬರ ಇಲಾಖೆ ಪರಿಶೀಲನೆ ನಡೆಸುತ್ತಿದೆ.

"ಸಮಗ್ರ ರಸಗೊಬ್ಬರ ನಿರ್ವಹಣಾ ವ್ಯವಸ್ಥೆಯ ಮೂಲಕ ವಾರದ ಆಧಾರದಲ್ಲಿ ಸಬ್ಸಿಡಿ ಪಾವತಿಸಲಾಗುತ್ತಿದೆ. ಒಟ್ಟಾರೆ ಪರಿಸ್ಥಿತಿ ಬಲಿಷ್ಠ, ಸ್ಥಿರ ಮತ್ತು ಆರಾಮದಾಯಕವಾಗಿದೆ" ಎಂದು ಅಪರ್ಣಾ ಶರ್ಮ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries